ಖಾಸಗಿ ವೈದ್ಯರು ಸರಕಾರಿ ನಿಲುವನ್ನು ಬೆಂಬಲಿಸಲಿ: ಯುವ ಕಾಂಗ್ರೆಸ್
ಮಂಗಳೂರು, ನ. 17: ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರಕಾರದ ಕ್ರಮವು ಬಡವರ ಪರವಾಗಿದ್ದು, ಇದನ್ನು ಖಾಸಗಿ ವೈದ್ಯರು ಬೆಂಬಲಿಸಬೇಕು ಎಂದು ಯುವ ಕಾಂಗ್ರೆಸ್ ಮಂಗಳೂರು ನಗರ ಉತ್ತರ ವಲಯ ಸಮಿತಿಯ ಉಪಾಧ್ಯಕ್ಷ ಉತ್ತಮ್ ಆಳ್ವ ಸಲಹೆ ನೀಡಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸುಲಿಗೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ದಿಟ್ಟ ಕ್ರಮ ಕೈಗೊಂಡಿದೆ. ಬಡ ರೋಗಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ವೈದ್ಯರು ಸರಕಾರದ ಕ್ರಮವನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.
ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವಾಸ್ ಕುಮಾರ್‌ದಾಸ್ ಮಾತನಾಡಿ, ರೋಗಿಗಳಿಂದ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರಕಾರ ಕೈಗೊಂಡಿರುವ ಕ್ರಮ ಉತ್ತಮವಾಗಿದೆ. ರೋಗಿಗಳ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಡಜನರ ಪರವಾಗಿರುವ ಸರಕಾರದ ಕ್ರಮಕ್ಕೆ ವೈದ್ಯರು ಬೆಂಬಲ ಸೂಚಿಸಬೇಕು ಎಂದವರು ಹೇಳಿದರು. ಕಾಂಗ್ರೆಸ್ ಮುಖಂಡರಾದ ಹುಸೇನ್ ಕಾಟಿಪಳ್ಳ, ಮುಹಮ್ಮದ್ ಕುಂಜತ್‌ಬೈಲ್, ಉಮೇಶ್, ಜೈಸನ್, ಅಬ್ದುರ್ರಹ್ಮಾನ್ ಕುಂಜತ್‌ಬೈಲ್, ಉಪಸ್ಥಿತರಿದ್ದರು.







