ರಾಜ್ಯ ಮಟ್ಟದ ಟೆಕ್ವಾಂಡೊ ಪಂದ್ಯಾವಳಿಗೆ ಮಡಿಕೇರಿಯಲ್ಲಿ ಚಾಲನೆ

ಮಡಿಕೇರಿ,ನ.17 :ಒಲಂಪಿಕ್ ಕ್ರೀಡೆಯಾಗಿ ಪರಿಗಣಿತವಾಗಿರುವ ಆತ್ಮರಕ್ಷಣೆಯ ಕಲೆ ಟೆಕ್ವಾಂಡೊದ 35ನೇ ರಾಜ್ಯ ಮಟ್ಟದ ಪಂದ್ಯಾವಳಿ ಮಡಿಕೇರಿಯಲ್ಲಿ ವಿದ್ಯುಕ್ತವಾಗಿ ಆರಂಭಗೊಂಡಿದ್ದು, ರಾಜ್ಯದ 25 ಜಿಲ್ಲೆಗಳ ಸಾವಿರಕ್ಕೂ ಹೆಚ್ಚಿನ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.
ಕರ್ನಾಟಕ ಟೆಕ್ವಾಂಡೊ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕೊಡಗು ಜಿಲ್ಲಾ ಯುವಜನ ಸೇವೆ ಮತ್ತು ಕ್ರಿಡಾ ಇಲಾಖೆಯ ಸಹಯೋಗದೊಂದಿಗೆ ಕೊಡಗು ಜಿಲ್ಲಾ ಟೆಕ್ವಾಂಡೊ ಸ್ಪೋಟ್ರ್ಸ್ ಸಂಸ್ಥೆಯ ವತಿಯಿಂದ ನಗರದ ಕಾವೇರಿ ಹಾಲ್‍ನಲ್ಲಿ ಟೆಕ್ವಾಂಡೊ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ರಾಜ್ಯ ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ, ವಿದ್ಯಾರ್ಥಿಗಳು ಪಾಠ ಪ್ರವಚನದೊಂದಿಗೆ ಆತ್ಮರಕ್ಷಣೆಯ ಟೆಕ್ವಾಂಡೊದಂತಹ ಸಾಹಸ ಕಲೆಯನ್ನು ಕೂಡ ಮೈಗೂಡಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಕರೆ ನೀಡಿದರು. ಶಿಕ್ಷಣದ ಹಂತದಲ್ಲಿ ಕಲಿತ ವಿದ್ಯೆಯನ್ನು ಅರ್ಧದಲ್ಲೆ ಕೈಬಿಡದೆ ಬದುಕಿನುದ್ದಕ್ಕೂ ಮುಂದುವರಿಸಿಕೊಂಡು ಹೋಗಬೇಕೆಂದರು.
ನಗರಸಭೆಯ ಮಾಜಿ ಅಧ್ಯಕ್ಷರಾದ ಪಿ.ಡಿ.ಪೊನ್ನಪ್ಪ ಮಾತನಾಡಿ, ವೈಯಕ್ತಿಕ ಪರಿಶ್ರಮವನ್ನು ಬೇಡುವ ಟೆಕ್ವಾಂಡೊ ಕ್ರೀಡೆಯನ್ನು ಪ್ರತಿದಿನ ಮೂರು ಗಂಟೆಯಷ್ಟು ಕಾಲ ಸಾಧನೆ ಮಾಡಬೇಕೆಂದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಬೇಕೆಂದರು.
ನಗರಸಭಾ ಉಪಾಧ್ಯಕ್ಷರಾದ ಕೆ.ಎಸ್.ಪ್ರಕಾಶ್ ಮಾತನಾಡಿ, ಟೆಕ್ವಾಂಡೊ ಅಭ್ಯಾಸದಿಂದ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದೆಂದರು. ಇಂತಹ ಕ್ರೀಡೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಫೂರಕವಾಗಿದ್ದು, ನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಟೆಕ್ವಾಂಡೊ ಪಂದ್ಯಾವಳಿಗೆ ಅಗತ್ಯ ನೆರವು ಒದಗಿಸಲು ನಗರಸಭೆಯ ಮೂಲಕ ಪ್ರಯತ್ನಿಸಲಾಗುವುದೆಂದರು.
ಕರ್ನಾಟಕ ಟೆಕ್ವಾಂಡೊ ಸಂಸ್ಥೆಯ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಮಾತನಾಡಿ, ರಾಜ್ಯ ಮಟ್ಟದ ಈ ಪಂದ್ಯಾವಳಿಯ ಸಬ್ ಜೂನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಸ್ಪರ್ಧಿಗಳು ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟೆಕ್ವಾಂಡೊ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದರು. ಸೀನಿಯರ್ ವಿಭಾಗದಲ್ಲಿ ಚಿನ್ನದ ಪದಕದ ಸಾಧನೆ ಮಾಡುವವರು ಮುಂದಿನ ಡಿಸೆಂಬರ್ 1 ರಿಂದ 3ರವರೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದುಕೊಳ್ಳಲಿರುವುದಾಗಿ ತಿಳಿಸಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಮದೆಮಹೇಶ್ವರ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಗುಲಾಬಿ ಜನಾರ್ಧನ ಅವರು ಮಾತನಾಡಿ, ಟೆಕ್ವಾಂಡೊ ಕ್ರಿಡೆಯ ಮೂಲಕ ಏಕಾಗ್ರತೆಯನ್ನು ಸಾಧಿಸಲು ಪೂರಕವಾಗಿದೆ. ಆತ್ಮರಕ್ಷಣೆಯ ಈ ಕಲೆಯನ್ನು ಮಕ್ಕಳು ಕಲಿಯುವಂತಾಗಲು ಪೋಷಕರು ಅಗತ್ಯ ಪ್ರೋತ್ಸಾಹವನ್ನು ನೀಡಬೇಕೆಂದು ಮನವಿ ಮಾಡಿದರು.
ಕರ್ನಾಟಕ ಟೆಕ್ವಾಂಡೊ ಸಂಸ್ಥೆಯ ಉಪಾಧ್ಯಕ್ಷರಾದ ಗಿರೀಶ್ ಅವರು, ಟೆಕ್ವಾಂಡೊ ಕ್ರೀಡೆಗೆ ಸರ್ಕಾರ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದು, ಈ ಕ್ರ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ಧನ ಸೇರಿದಂತೆ ಅಗತ್ಯ ನೆರವನ್ನು ಒದಗಿಸುತ್ತಿದೆ. ಈ ಕೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸೇರ್ಪಡೆಯ ಹಂತದಲ್ಲಿ ವಿಶೇಷ ಆದ್ಯತೆ ಇರುವುದಾಗಿ ಮಾಹಿತಿ ನೀಡಿದರು.
ಟೆಕ್ವಾಂಡೊದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧsಕರಾದ ಬಿ.ಜಿ.ಶರ್ಮಿಳ, ಕೆ.ಎಸ್. ಭವ್ಯಶ್ರೀ ಆಳ್ವಾ, ವಿ.ಆರ್.ಅರ್ಜುನ್ ಮತ್ತು ಟಿ. ಪವಿತ್ ಜನಾರ್ಧನ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಟೆಕ್ವಾಂಡೊ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಲೋಕೇಶ್ ರೈ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೆರವಣಿಗೆ
ಸಮಾರಂಭಕ್ಕೂ ಮೊದಲು ವಿವಿಧ ಜಿಲ್ಲೆಗಳ ಸ್ಪರ್ಧಿಗಳು, ತರಬೇತುದಾರರು, ಟೆಕ್ವಾಂಡೊದ ರಾಜ್ಯ ಮತ್ತು ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ನಗರದ ಗಾಂಧಿ ಮೈದಾನದಿಂದ ಕಾವೇರಿ ಕಲಾ ಕ್ಷೇತ್ರದವರೆಗೆ ಮೆರವಣಿಗೆ ನಡೆಸಿದರು.







