ಅಮೆರಿಕದಲ್ಲಿ ಮೃತಪಟ್ಟ ಶೆರಿನ್ ಮ್ಯಾಥ್ಯೂಸ್ ಳ ದತ್ತು ತಾಯಿಯ ಬಂಧನ

ಹ್ಯೂಸ್ಟನ್ (ಅಮೆರಿಕ), ನ. 17: ಕಳೆದ ತಿಂಗಳು ಡಲ್ಲಾಸ್‌ನ ಚರಂಡಿಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಭಾರತೀಯ ಮಗು ಶೆರಿನ್ ಮ್ಯಾಥ್ಯೂಸ್‌ಳ ದತ್ತು ತಾಯಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
3 ವರ್ಷದ ಮಗು ನಾಪತ್ತೆಯಾಗಿದೆಯೆಂದು ಪೊಲೀಸರಿಗೆ ದೂರು ನೀಡಿದ ಮೊದಲಿನ ರಾತ್ರಿ ಭಾರತೀಯ-ಅಮೆರಿಕನ್ ದಂಪತಿಯು ಮಗುವನ್ನು ಒಂಟಿಯಾಗಿ ಮನೆಯ ಹೊರಗಡೆ ಬಿಟ್ಟಿದ್ದರು ಎಂಬುದಾಗಿ ಪೊಲೀಸರು ಆರೋಪಿಸಿದ್ದಾರೆ.
ಮಗುವಿನ ದತ್ತು ತಂದೆ ವೆಸ್ಲಿ ಮ್ಯಾಥ್ಯೂಸ್‌ನನ್ನು ಪೊಲೀಸರು ಕಳೆದ ತಿಂಗಳೇ ಬಂಧಿಸಿದ್ದಾರೆ.
ವೆಸ್ಲಿ ಮ್ಯಾಥ್ಯೂಸ್ ಮತ್ತು ಆತನ ಹೆಂಡತಿ ಸಿನಿ ಮ್ಯಾಥ್ಯೂಸ್ ಅಕ್ಟೋಬರ್ 6ರ ರಾತ್ರಿ ತಮ್ಮ ಪುತ್ರಿಯೊಂದಿಗೆ ಹೊರಗಡೆ ಊಟಕ್ಕೆ ಹೋಗಿದ್ದರು. ಶೆರಿನ್ ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ಅವರು ಮಗುವನ್ನು ಬಿಟ್ಟು ಹೋಗಿದ್ದರು.
ನೋಂದಾಯಿತ ಭಾರತೀಯ-ಅಮೆರಿಕನ್ ನರ್ಸ್ ಆಗಿರುವ 35 ವರ್ಷದ ಸಿನಿ ಮ್ಯಾಥ್ಯೂಸ್‌ರನ್ನು ರಿಚರ್ಡ್‌ಸನ್ ಪೊಲೀಸರು ಬಂಧಿಸಿದರು.
ಮಗುವನ್ನು ಹೊರಗೆ ಬಿಟ್ಟು ಅಪಾಯಕ್ಕೆ ಗುರಿಪಡಿಸಿದ ಆರೋಪವನ್ನು ಆಕೆಯ ಮೇಲೆ ಹೊರಿಸಲಾಗಿದೆ. ಇದಕ್ಕೆ 2.5 ಲಕ್ಷ ಡಾಲರ್ ಜಾಮೀನು ನಿಗದಿಪಡಿಸಲಾಗಿದೆ. ಈ ಅಪರಾಧಕ್ಕೆ ಆರು ತಿಂಗಳಿನಿಂದ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಬಾಲಕಿಯ ದತ್ತು ತಂದೆ 37 ವರ್ಷದ ವೆಸ್ಲಿಯ ವಿರುದ್ಧ ಮಗುವಿನ ಸಾವಿಗೆ ಕಾರಣವಾದ ಆರೋಪವನ್ನು ಹೊರಿಸಲಾಗಿದೆ. ಆತನಿಗೆ 10 ಲಕ್ಷ ಡಾಲರ್ ಜಾಮೀನು ನಿಗದಿಪಡಿಸಲಾಗಿದೆ. ಅಪರಾಧ ಸಾಬೀತಾದರೆ 99 ವರ್ಷಗಳ ಜೈಲು ಶಿಕ್ಷೆಗೆ ಅವಕಾಶವಿದೆ.
ವೆಸ್ಲಿ ಆರಂಭದಲ್ಲಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಹಾಲು ಕುಡಿಯದ ಹಿನ್ನೆಲೆಯಲ್ಲಿ ಶೆರಿನ್‌ಳನ್ನು ಮುಂಜಾನೆ 3 ಗಂಟೆಗೆ ಮನೆಯಿಂದ ಹೊರಗಿರುವ ಮರವೊಂದರ ಕೆಳಗೆ ನಿಲ್ಲುವಂತೆ ಹೇಳಿದ್ದೆ, 15 ನಿಮಿಷ ಬಳಿಕ ಹೊರಗೆ ಹೋಗಿ ನೋಡಿದಾಗ ಮಗು ಇರಲಿಲ್ಲ ಎಂದು ಹೇಳಿದ್ದನು.
ಹಲವು ದಿನಗಳ ಬಳಿಕ ಮಗು ಮನೆಯಿಂದ ಅರ್ಧ ಕಿ.ಮೀ. ದೂರದ ಚರಂಡಿಯಲ್ಲಿ ಪತ್ತೆಯಾದಾಗ, ತನ್ನ ಹೇಳಿಕೆಯನ್ನು ಆತ ಬದಲಾಯಿಸಿದನು. ಹಾಲು ಕುಡಿಯಲು ನಿರಾಕರಿಸಿದ ಮಗುವಿಗೆ ಹಾಲು ಕುಡಿಸಿದಾಗ ಅದು ಉಸಿರುಗಟ್ಟಿತು ಹಾಗೂ ಉಸಿರಾಡುವುದನ್ನು ನಿಲ್ಲಿಸಿತು ಎಂದು ತನ್ನ ಎರಡನೆ ಹೇಳಿಕೆಯಲ್ಲಿ ಆತ ಹೇಳಿದ್ದಾನೆ.







