ವೈದ್ಯರ ಮುಷ್ಕರ ಜನವಿರೋಧಿ ನಿಲುವು: ವೀರಸಂಗಯ್ಯ
ಖಾಸಗಿ ವೈದ್ಯರ ಮುಷ್ಕರಕ್ಕೆ ಪ್ರಗತಿಪರ ಸಂಘಟನೆಗಳ ಆಕ್ರೋಶ
ಬೆಂಗಳೂರು, ನ.17: ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ರಾಜ್ಯದ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಆಕ್ರೋಶ ವ್ಯಕ್ತಪಡಿಸಿವೆ.
ಕರ್ನಾಟಕ ಜನಾರೋಗ್ಯ ಚಳವಳಿ, ಕರ್ನಾಟಕ ರಣಧೀರ ಪಡೆ, ಕರ್ನಾಟಕ ಜನಶಕ್ತಿ ಸಂಘಟನೆ ಸೇರಿದಂತೆ ಪ್ರತಿಪರ ಸಂಘಟನೆಗಳ ಒಕ್ಕೂಟವು ನಗರದ ಟೌನ್ ಮುಂಭಾಗ, ಖಾಸಗಿ ವೈದ್ಯರ ಜನವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿದವು. ವೈದ್ಯರಿಗೆ ಜನರ ಆರೋಗ್ಯಕ್ಕೆ ಹಣವೇ ಮುಖ್ಯವೆಂಬುದನ್ನು ಮುಷ್ಕರ ಮಾಡುವ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತ ಮುಖಂಡ ಹಾಗೂ ಕಿಡ್ನಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರ ಸಂಗಯ್ಯ ಮಾತನಾಡಿ, ರಾಜ್ಯ ಸರಕಾರ ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸಲು ಹೊರಟಿರುವುದು ರೋಗಿಗಳು ತಮ್ಮ ಅಳಲನ್ನು ತೋಡಿಕೊಳ್ಳಲು ಒಂದು ವೇದಿಕೆ ಕಲ್ಪಿಸುವುದಕ್ಕಾಗಿಯೇ ಹೊರತು ವೈದ್ಯರ ವಿರುದ್ಧವಲ್ಲ ಎಂಬುದನ್ನು ವೈದ್ಯರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಮಾಣಿಕ ವೈದ್ಯರಾದರೆ ಯಾವ ಕಾಯ್ದೆಗೂ ಹೆದರಬೇಕಾಗಿಲ್ಲ. ಅದರಲ್ಲೂ ಕೆಪಿಎಂಇ ಮಸೂದೆ ಜನಪರವಾಗಿದ್ದು, ಬಡ ರೋಗಿಗಳ ಹಕ್ಕುಗಳನ್ನು ಸಂರಕ್ಷಿಸುವ ಕಾಯ್ದೆಯಾಗಿದೆ. ಇದನ್ನು ವೈದ್ಯರೇ ಅಭೂತಪೂರ್ವಕವಾಗಿ ಸ್ವಾಗತಿಸಬೇಕಾಗಿತ್ತು. ಆದರೆ, ಹಣದ ಲಾಬಿಗೆ ಮಣಿದಿರುವ ವೈದ್ಯರು ಮಸೂದೆ ವಿರುದ್ಧ ಮುಷ್ಕರ ನಡೆಸುತ್ತಿರುವುದು ಜನವಿರೋಧಿ ನಿಲುವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತಿನ ಜಾಗತಿಕ ಯುಗದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಗಳನ್ನೇ ಹಣ ಮಾಡುವ ದಂಧೆಯಾಗಿಸಿಕೊಂಡಿದ್ದಾರೆ. ಇದರಿಂದಾಗಿ ಸಾಮಾನ್ಯ ರೋಗಗಳಿಗೂ ಲಕ್ಷಾಂತರ ರೂ. ಖರ್ಚು ಮಾಡುವಂತಹ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಯ ಹಣದ ದಂಧೆಯನ್ನು ನಿಯಂತ್ರಿಸಬೇಕಾದರೆ ಕೆಪಿಎಂಇ ಕಾಯ್ದೆಯ ಜಾರಿ ಅಗತ್ಯವಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ, ಕರ್ನಾಟಕ ಜನಶಕ್ತಿಯ ವಾಸು, ಗೌರಿ, ಕರ್ನಾಟಕ ರಣವೀರ ಪಡೆ, ಕರ್ನಾಟಕ ಜನಾರೋಗ್ಯ ಚಳವಳಿಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.







