ಏಲಕ್ಕಿ ಬಾಳೆಯಿಂದ ರೈತನ ಬದುಕು ಹಸನಾದ ಕತೆ

ಬೆಂಗಳೂರು, ನ.17: ದಾವಣಗೆರೆಯಲ್ಲಿ ಪ್ರತಿ ವರ್ಷ ಸುಮಾರು 5000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಏಲಕ್ಕಿ ಬಾಳೆ ಬೆಳೆಯಲಾಗುತ್ತಿದ್ದು, ಇಲ್ಲಿನ ಶೇ.90 ರಷ್ಟು ರೈತರಿಗೆ ಏಲಕ್ಕಿ ಬಾಳೆಯೇ ಪ್ರಮುಖ ಬೆಳೆಯಾಗಿದೆ.
ದಾವಣಗೆರೆಯ ವಾತಾವರಣ ಏಲಕ್ಕಿ ಬಾಳೆಗೆ ಹೇಳಿ ಮಾಡಿಸಿದ ವಾತಾವರಣವಾಗಿದೆ. ಹಾಗೂ ಇಲ್ಲಿನ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇರುವುದರಿಂದ ರೈತರು ಏಲಕ್ಕಿ ಬಾಳೆ ಬೆಳೆಯುವತ್ತ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಏಲಕ್ಕಿ ಬಾಳೆಯಿಂದ ಜಿಲ್ಲೆಯ ಹಲವು ರೈತರು ತಮ್ಮ ಬದುಕು ಹಸನಾಗಿಸಿಕೊಂಡಿದ್ದಾರೆ.
ಬದುಕು ಹಸನಾದ ಕತೆ: ಏಲಕ್ಕಿ ಬಾಳೆಯನ್ನು ಬೆಳೆದು ಬುದುಕನ್ನು ಹಸನಾಗಿಸಿಕೊಂಡ ನೂರಾರು ರೈತರನ್ನು ನಾವು ಕಾಣಬಹುದಾಗಿದೆ. ಅದರಲ್ಲಿ ಮುಖ್ಯವಾಗಿ ಮಾಯಕೊಂಡ ಸಮೀಪದ ಹಿಂಡಸಕಟ್ಟೆ ಗ್ರಾಮದ ಡಿ. ನಾಗರಾಜಪ್ಪನವರಯಶೋಗಾಥೆಯನ್ನು ಇಂದಿನ ಯುವ ಪೀಳಿಗೆ ತಿಳಿಯುವುದು ಅಗತ್ಯವಾಗಿದೆ.
ಇವರು ತಮ್ಮ 3 ಎಕರೆಯಲ್ಲಿ 1950 ಬಾಳೆ ಸಸಿಗಳಿಂದ 42 ಟನ್ ಏಲಕ್ಕಿ ಬಾಳೆ ಬೆಳೆದು ಮಾದರಿಯಾಗಿದ್ದಾರೆ. ಪ್ರತಿ ಗೊನೆಯು ಸರಾಸರಿ 20 ರಿಂದ 22 ಕೆ.ಜಿ. ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 50 ರಿಂದ 55 ರೂ. ಸಿಕ್ಕಿದೆ. ಬಾಳೆ ಬೆಳೆಯಿಂದ ಇವರ ಆದಾಯ 21 ಲಕ್ಷ ರೂ.ಆಗಿದೆ. ಅದರಲ್ಲೂ ಅಡಿಕೆ ತೋಟದಲ್ಲಿ ಅಂತರಬೆಳೆಯಾಗಿ ಏಲಕ್ಕಿ ಬಾಳೆಯನ್ನು ಬೆಳೆಯುವ ಮೂಲಕ ಅನೇಕ ರೈತರಿಗೆ ಮಾದರಿಯಾಗಿದೆ.
ಇವರು ತೋಟಗಾರಿಕೆ ಇಲಾಖೆಯಿಂದ 2016-17ನೆ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯ ಸಹಾಯಧನದಲ್ಲಿ ಆಧುನಿಕ ತೋಟಗಾರಿಕೆ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದಿದ್ದಾರೆ. ಜತೆಗೆ ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಹನಿನೀರಾವರಿ, ಕೃಷಿಹೊಂಡ ಮುಂತಾದ ಸೌಲಭ್ಯಗಳನ್ನು ಪಡೆದು ಬಾಳೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಂಡಿದ್ದಾರೆ.
ಉತ್ತಮ ಬೆಳೆ ತೆಗೆಯಬೇಕೆಂಬ ಛಲ, ಲಭ್ಯವಿರುವ ನೀರಿನ ಸರಿಯಾದ ಬಳಕೆ, ತಾಂತ್ರಿಕತೆಗಳ ಅಳವಡಿಕೆ ತೋಟಗಾರಿಕೆ ಇಲಾಖೆಯ ಆರ್ಥಿಕ ನೆರವು ಹಾಗೂ ಸಹಕಾರದಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದು ರೈತ ನಾಗರಾಜಪ್ಪಸಂತಸ ವ್ಯಕ್ತಪಡಿಸುತ್ತಾರೆ.







