ಕೋಲಾರ :ಕಾನೂನು ಅರಿವು ಮೂಡಿಸಲು ಸೈಕಲ್ ಜಾಥಾ ನಡೆಸಿದ ನ್ಯಾಯಾಧೀಶರು

ಕೋಲಾರ,ನ.17 :ಕೋಲಾರದಲ್ಲಿ ಶುಕ್ರವಾರ ಬೆಳಗ್ಗೆ ಸಿವಿಲ್ ನ್ಯಾಯಾಧೀಶ ಗುರುರಾಜ್ ಶೀರೊಳ್ ಸೈಕಲ್ ಏರಿ ಕೋಲಾರದಲ್ಲಿ ಸುತ್ತಾಡಿದರು. ಕಿಂದರ ಜೋಗಿಯಂತೆ ಅವರನ್ನು ಶಾಲಾ ವಿದ್ಯಾರ್ಥಿಗಳು ಹಿಂಬಾಲಿಸಿದರು. ಅವರು ಸೈಕಲ್ ಏರಿ ಏನು ಮಾಡಿದರು ಎಲ್ಲಲ್ಲಿ ಸುತ್ತಾಡಿದರು ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಶಿರೊಳ್ ಶುಕ್ರವಾರ ಬೆಳಗ್ಗೆ ಪ್ರವಾಸಿ ಮಂದಿರದಿಂದ ಸೈಕಲ್ ಏರಿ ನಗರ ಪ್ರದಕ್ಷಿಣೆ ನಡೆಸಿದರು. ಅವರನ್ನು ಶಾಲಾ ವಿದ್ಯಾರ್ಥಿಗಳು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಜಾಗೃತಿ ಸೇವಾ ಸಂಸ್ಥೆಯ ಸದಸ್ಯರು ಮತ್ತು ಪೋಲೀಸರು ಹಿಂಬಾಲಿಸಿದರು. ಒಂದು ಗಂಟೆಗೂ ಹೆಚ್ಚುಕಾಲ ಸುತ್ತಿ ಎಂಜಿ ರಸ್ತೆ, ದೊಡ್ಡಪೇಟೆ, ಎಂಬಿ ರಸ್ತೆ, ಬಂಗಾರಪೇಟೆ ರಸ್ತೆಯ ಮೂಲಕ ಪ್ರವಾಸಿ ಮಂದಿರ ತಲುಪಿದರು.
ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಬಗ್ಗೆ ಅರಿವು ಮೂಡಿಸಲು ನ್ಯಾಯಾಧೀಶ ಗುರುರಾಜ್ ಶಿರೋಳ್ ಸೈಕಲ್ ಮೂಲಕ ಜಾಥಾ ನಡೆಸಿದರು. ಅನೇಕರು ಹಣ ಕಾಸಿನ ತೊಂದರೆಯಿಂದ ವಂಚಿತರಾಗಿದ್ದಾರೆ. ಉಚಿತ ಕಾನೂನು ನೆರವು ಇದ್ದರು ಅವರಿಗೆ ಅರಿವು ಇಲ್ಲ. ಉಚಿತ ಕಾನೂನು ಅರಿವು ಮೂಡಿಸಲು ಕೋಲಾರ ಜಿಲ್ಲಾ ಕಾನೂನು ನೆರವು ಒಂದು ವಾರದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ನ್ಯಾಯಾಧೀಶರು ಸೈಕಲ್ ಜಾಥಾ ನಡೆಸಿದರು.
ವಿದ್ಯಾರ್ಥಿಗಳು ಮತ್ತು ವಕೀಲರೊಂದಿಗೆ ಜಾಗೃತಿ ಸೇವಾ ಸಂಸ್ಥೆ ಕೈ ಜೋಡಿಸಿತು. ಉಚಿತ ಕಾನೂನು ನೆರವು ಬಗ್ಗೆ ಸಂಸ್ಥೆ ಜಾಗೃತಿ ಮೂಡಿಸುತ್ತಿದೆ. ಸೈಕಲ್ ಜಾತ ನಂತರ ನ್ಯಾಯಾಧೀಶ ಗುರುರಾಜ್ ಶಿರೋಳ್ ಮಹಿಳಾ ಸಮಾಜ ಶಾಲೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆನಂತರ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿ ಕಾನೂನು ಸೇವಾ ಪ್ರಾದಿಕಾರದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕಾನೂನು ನೆರವಿನ ಬಗ್ಗೆ ಮಾಹಿತಿ ಪಡೆಯುವಂತೆ ಕರೆ ನೀಡಿದರು.
ರಾಷ್ಟ್ರೀಯ ಕಾನೂನು ಸೇವಾ ಆಂದೋಲನದ ಅಂಗವಾಗಿ ನಡೆಯುತ್ತಿರುವ ಸಪ್ತಾಹ ಶನಿವಾರ ಸಮಾರೋಪಗೊಳ್ಳಲಿದೆ. ಸಪ್ತಾಹದಲ್ಲಿ ಕೋಲಾರ ಕಾನೂನು ಕಾಲೇಜು ಮತ್ತು ಬಸವಶ್ರೀ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.







