ರೊಹಿಂಗ್ಯಾ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಸೆಳೆಯುವ ಜಾಲಗಳು ಸಕ್ರಿಯ

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ನ. 17: ಮ್ಯಾನ್ಮಾರ್‌ನಲ್ಲಿ ಸೇನೆಯ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯಾ ನಿರಾಶ್ರಿತ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಹಲವು ಮಾನವಕಳ್ಳಸಾಗಣೆ ಗುಂಪುಗಳು ಕಾರ್ಯಪ್ರವೃತ್ತವಾಗಿವೆ.
ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದ 21 ವರ್ಷದ ಉಮ್ಮೆ ಕುಲ್ತುಮ್ ಬಾಂಗ್ಲಾದೇಶದಲ್ಲಿ ಹೊಸಜೀವನ ಆರಂಭಿಸುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರನ್ನು ವೇಶ್ಯಾವಾಟಿಕೆಗೆ ನೂಕಲಾಯಿತು.
ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಲಕ್ಷಕ್ಕೂ ಅಧಿಕ ನಿರಾಶ್ರಿತರ ಪೈಕಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಅವರ ಪೈಕಿ ಹೆಚ್ಚಿನವರು ಉಟ್ಟ ಬಟ್ಟೆಯಲ್ಲೇ ಓಡಿ ಬಂದವರು. ಹಾಗಾಗಿ, ಸಾಧ್ಯವಿರುವ ಯಾವುದೇ ರೀತಿಯಲ್ಲಾದರೂ ಬದುಕಲು ಅವರು ಹತಾಶರಾಗಿದ್ದಾರೆ.
ಗಡಿ ಸಮೀಪ ಒತ್ತೊತ್ತದ ಡೇರೆಗಳಲ್ಲಿ ಯಾವುದೇ ಕೆಲಸದ ನಿರೀಕ್ಷೆಗಳಿಲ್ಲದೆ ಬದುಕುತ್ತಿರುವ ನಿರಾಶ್ರಿತರು, ಏನು ಬರುತ್ತದೋ ಅದನ್ನು ಸ್ವೀಕರಿಸುವ ಮನೋಸ್ಥಿತಿಯಲ್ಲಿದ್ದಾರೆ. ಹಾಗಾಗಿ, ಹೆಚ್ಚಿನವರು ಮಾನವ ಕಳ್ಳಸಾಗಾಣಿಕೆದಾರರ ಬಲೆಗೆ ಬಿದ್ದಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ (ಐಒಎಂ) ಹೇಳಿದೆ.
ಹದಿಹರೆಯದ ಹುಡುಗಿಯರು ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ. ಅವರಿಗೆ ಮದುವೆ ಅಥವಾ ದೊಡ್ಡ ನಗರಗಳಲ್ಲಿ ಕೆಲಸದ ಆಮಿಷವೊಡ್ಡಲಾಗುತ್ತದೆ. ಆದರೆ, ಅಂತಿಮವಾಗಿ ಅವರು ಜೀತದಾಳುಗಳಾಗುತ್ತಾರೆ ಅಥವಾ ವೇಶ್ಯಾವಾಟಿಕೆಗಳಲ್ಲಿ ಬಂಧಿಯಾಗುತ್ತಾರೆ ಎಂದು ಐಒಎಂ ತಿಳಿಸಿದೆ.







