ಉಚಿತ ಕಾನೂನು ನೆರವು ನೀಡಲು ಪ್ರಾಧಿಕಾರ ಬದ್ಧ: ಸೋಮಶೇಖರ್
ಶಿವಮೊಗ್ಗ, ನ. 18: ಪ್ರತಿಯೊಬ್ಬರು ಕಾನೂನಿನ ಕುರಿತು ಮಾಹಿತಿ, ಸಲಹೆಗಳನ್ನು ಕಾನೂನು ಪ್ರಾಧಿಕಾರದ ಮೂಲಕ ಉಚಿತವಾಗಿ ಪಡೆದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ್ ಸಿ.ಬಾದಾಮಿ ಅವರು ಹೇಳಿದರು.
ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾಧಿಗಳ ಸಂಘ, ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ‘ಕಾನೂನು ಸೇವೆಗಳ ದಿನಾಚರಣೆ’ ಅಂಗವಾಗಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿದ್ದ ಕಾನೂನುಗಳ ಬಗ್ಗೆ ಅರಿವು ನೆರವು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ದೊರೆಯಬೇಕಾದರೆ ಎಲ್ಲರೂ ಕಾಯ್ದೆ-ಕಾನೂನುಗಳ ಅರಿವು ಹೊಂದಿರಬೇಕು. ಕಾನೂನು ಸಾಕ್ಷರತೆ, ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ಕೊಡುವುದು, ಜನತಾ ನ್ಯಾಯಲಯಗಳ ಮೂಲಕ ಪ್ರಕರಣವನ್ನು ಶೀಘ್ರವಾಗಿ ಕಡಿಮೆ ಖರ್ಚಿನಲ್ಲಿ ಇತ್ಯರ್ಥಗೊಳಿಸುವುದು, ಕಾಯಂ ಜನತಾ ನ್ಯಾಯಾಲಯಗಳ ಮೂಲಕ ಕೆಲವು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥ ಹೀಗೆ ಸಾರ್ವಜನಿಕರಿಗೆ ಹಲವಾರು ಕಾನೂನು ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿರುವ ಕಾನೂನು ಪ್ರಾಧಿಕಾರದ ಉದ್ದೇಶಗಳು ಯಶಸ್ವಿಯಾಗಬೇಕಾದರೆ, ನಾಗರಿಕ ವಲಯದ ಸಹಕಾರ ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರು, ಮಹಿಳೆಯರು, ಮಕ್ಕಳು, ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವವರು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು, ಬುದ್ದಿಮಾಂದ್ಯರು, ಗಡಿ ಪ್ರದೇಶದ ಜನರು, ಯಾಸಿಡ್‌ದಾಳಿಗೆ ಒಳಗಾದವರು, ಹಿರಿಯ ನಾಗರಿಕರು ಸೇರಿದಂತೆ ಸಮಾಜದ ಜನತೆಗೆ ಕಾನೂನು ರೀತಿ ಸಲಹೆ ನೀಡಿ ಅವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಪ್ರಾಧಿಕಾರವು 11 ಅಂಶಗಳ ಯೋಜನೆ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಪ್ರಾಧಿಕಾರದ ಉಪಾಧ್ಯಕ್ಷೆ ತಿಲಕ ಮಧುಸೂದನ್ ಮಾತನಾಡಿ, ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಕ್ತಿ ನಮ್ಮ ಕೈಯಲ್ಲಿದೆ. ಎಲ್ಲರೂ ಒಳ್ಳೆ ಆಲೋಚನೆ ಮಾಡಬೇಕು. ಹೊರ ಪ್ರಪಂಚಕ್ಕೆ ಹೋಗಿ, ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕು. ಹಾಗೂ ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ, ಸಲಹೆ, ಮಾರ್ಗದರ್ಶನವನ್ನು ಕಾನೂನು ಪ್ರಾಧಿಕಾರ ಉಚಿತ ಮತ್ತು ಸಮರ್ಪಕವಾಗಿ ಮಾಹಿತಿ ದೊರೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧೀಕ್ಷಕ ವಿ.ಶೇಷಮೂರ್ತಿ, ಜಿಲ್ಲಾ ಕಾರಾಗೃಹದ ವೈದ್ಯಾಧಿಕಾರಿ ಡಾ.ರಘುಪ್ರಸಾದ್, ಕಾನೂನು ಪ್ರಾಧಿಕಾರದ ಅರೆಕಾಲಿಕ ಸೇವಕರು, ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







