ಪಠ್ಯದಿಂದ ಜೀವನಾನುಭವ ಪಡೆಯಲು ಸಾಧ್ಯವಿಲ್ಲ: ಚೆನ್ನಬಸಪ್ಪ
ಶಿವಮೊಗ್ಗ, ನ.18: ಕೇವಲ ಪಠ್ಯದಿಂದ ಜೀವನಾನುಭವ ಪಡೆಯಲು ಸಾಧ್ಯವಿಲ್ಲ. ಪ್ರತಿಭೆಯನ್ನು ಹೊರಜಗತ್ತಿಗೆ ತೋರ್ಪಡಿಸುವ ಮೂಲಕ ವೇದಿಕೆಯನ್ನು ಪಡೆದು ಸಾಧನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ನಗರದ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತರಾಗುವಂತೆ ಉತ್ತೇಜಿಸಬೇಕು. ಓದು-ಬರಹ ಕಲಿತಾಕ್ಷಣ ಅದು ಶಿಕ್ಷಣವಾಗುವುದಿಲ್ಲ. ನಮ್ಮ ಜೀವನಕ್ಕೆ ನೈಜವಾಗಿ ಬೇಕಾದ ಚಟುವಟಿಕೆಗಳನ್ನು ಕಲಿಯಬೇಕು. ಇದೇ ವೇಳೆ ಸಹಬಾಳ್ವೆಯನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಭೆಯನ್ನು ಅಭಿವ್ಯಕ್ತಿಪಡಿಸಲು ಶಾಲಾ-ಕಾಲೇಜು ಮಟ್ಟದಲ್ಲಿ ಸಾಕಷ್ಟು ಅವಕಾಶಗಳು ಲಭ್ಯವಾಗುತ್ತವೆ. ಅವುಗಳನ್ನು ಸದುಪಯೋಗಪಡೆದುಕೊಳ್ಳುವ ಕೆಲಸವಾಗಬೇಕು. ಇದರಲ್ಲಿ ಶಿಕ್ಷಕರ ಪಾತ್ರವೂ ಬಹುಮುಖ್ಯವಾದುದು. ಕ್ರಿಯಾಶೀಲ ಚಟುವಟಿಕೆಯಿಂದ ಮಾತ್ರ ನಮ್ಮ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಎಮ್ಮೆಲ್ಸಿ ಆರ್.ಪ್ರಸನ್ನಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪುಸ್ತಕ ಜ್ಞ್ಞಾನ ಯಾವುದಕ್ಕೂ ಪ್ರಯೋಜನ ಬರುವುದಿಲ್ಲ. ಪಠ್ಯೇತರ ಚಟುವಟಿಕೆ ಜೀವನದ ಮಾರ್ಗವನ್ನು ತಿಳಿಸಿಕೊಡುತ್ತದೆ. ಮುಂದಿನ ಜೀವನಕ್ಕೆ ಅದು ಮೆಟ್ಟಿಲಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಡಿವಿಎಸ್ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ ವಹಿಸಿದ್ದರು. ಸಂಸ್ಕೃತ ಉಪನ್ಯಾಸಕ ದತ್ತಮೂರ್ತಿ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್.ರಾಜಶೇಖರ್, ನಿರ್ದೇಶಕ ಎಸ್.ಪಿ.ದಿನೇಶ್, ಪಿಯು ಡಿಡಿಪಿಐ ಟಿ. ಗಂಗಾಧರಪ್ಪ, ಡಿವಿಎಸ್ ಸ್ವತಂತ್ರ ಪೂ ಕಾಲೇಜಿನ ಪ್ರಾಚಾರ್ಯ ಮಹದೇವಯ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ಶೃತಿ ಕಾರ್ಯಕ್ರಮ ನಿರೂಪಿಸಿದರು.







