ಧಾರ್ಮಿಕ ಸ್ಥಳದಲ್ಲಿ ರಾಜಕಾರಣ ಬೇಡ: ಗೋಪಾಲ ಭಂಡಾರಿ
ಚಿಕ್ಕಮಗಳೂರು, ನ.18: ಸರ್ವಧರ್ಮದ ಸಮನ್ವಯತೆ ಸಾರುವ ಗುರು ದತ್ತಾತ್ರೆಯ ಬಾಬಾಬುಡಾನ್‌ಗಿರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಭಂಡಾರಿ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪವಿತ್ರ ಸ್ಥಳಗಳಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಪಶ್ಚಿಮ ಘಟ್ಟದ ತಪ್ಪಲಿನ ರಾಜ್ಯದ ಅತೀ ಎತ್ತರದ ಶಿಖರ ಮುಳ್ಳಯ್ಯನ ಗಿರಿ ತಪ್ಪಲಿನ ಈ ಬೆಟ್ಟ ನೂರಾರು ವರ್ಷ ಸದ್ದಿಲ್ಲದೆ ಮಳೆ, ಬೆಳೆಗೆ ಕಾರಣವಾಗಿದ್ದನ್ನು ಸಂಘ ಪರಿವಾರದವರು ರಾಜಕಾರಣದ ಸ್ಥಳವನ್ನಾಗಿ ಬಳಸಿಕೊಂಡದ್ದು ವಿಪರ್ಯಾಸ ಎಂದು ಅಭಿಪ್ರಾಯಿಸಿದರು.
ಯಾವುದೇ ಜಾತಿ, ಧರ್ಮದ ಜನರು ತಮ್ಮ ನಂಬಿಕೆಗೆ ತಕ್ಕಂತೆ ಪರಂಪರೆಯಂತೆ ಪೂಜೆ ಪುನಸ್ಕಾರ ನಡೆಸುತ್ತಾ ಬಂದಿದ್ದಾರೆ. ಅದಕ್ಕೆ ಮತ್ತೊಂದು ಧರ್ಮದವರು ಭಂಗ ತರಬಾರದು. ಒಂದೊಮ್ಮೆ ಹಾಗೆ ಮಾಡಿದರೆ ಅದು ತಾತ್ಕಾಲಿಕ ರಾಜಕೀಯ ಲಾಭ ಮಾಡಿಕೊಡಬಹುದು. ಆದರೆ, ಸಮಾಜದ ಸ್ವಾಸ್ಥ ಹಾಳಾಗಿಬಿಡುತ್ತದೆ. ಆದುದ್ದರಿಂದ ಯಾವುದೇ ರಾಜಕೀಯ ಪಕ್ಷಗಳಾಗಲಿ ವೈಯಕ್ತಿಕವಾಗಿ ಯಾವುದೇ ಮುಖಂಡರು ಸಾಸ್ಥ ಹಾಳುಮಾಡಬಾರದೆಂದು ನುಡಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ, ಕೆಪಿಸಿಸಿ ಕಾರ್ಯದರ್ಶಿ ಕಳ್ಳಿಗೆ ತಾರನಾಥಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಸಿಲ್ವರ್‌ಸ್ಟರ್, ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಜಿಲ್ಲಾಧ್ಯಕ್ಷ ಕಾರ್ತಿಕ್ ಜಿ.ಚೆಟ್ಟಿಯಾರ್ ಮತ್ತಿತರರಿದ್ದರು.







