ತಾಂತ್ರಿಕತೆಯಿಂದ ಸಹಕಾರ ಕ್ಷೇತ್ರವನ್ನು ಬಲಪಡಿಸಿ: ರಾಜಣ್ಣ

ತುಮಕೂರು, ನ.18: ತಾಂತ್ರಿಕ ಸೌಲಭ್ಯಗಳ ಬಳಕೆಯಲ್ಲಿ ಸಹಕಾರಿ ಸಂಸ್ಥೆಗಳು ಹಿಂದುಳಿದಿರುವುದರಿಂದ ಇಂದು ಸಹಕಾರಿ ಸಂಸ್ಥೆಗಳು ದುಸ್ಥಿತಿ ತಲುಪುವ ಭೀತಿಯಲ್ಲಿವೆ. ಆದ್ದರಿಂದ ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸಿ, ಕ್ಷೇತ್ರವನ್ನು ಬಲಪಡಿಸುವ ಅಗತ್ಯವಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ನಡೆದ 64ನೆ ಅಖಿಲಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಕಾರ ಸಂಸ್ಥೆಗಳು ಸ್ಪರ್ಧಿಸಬೇಕಾದರೆ, ತಾಂತ್ರಿಕತೆಯ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಹೊಸ ಹೊಸ ಸೇವೆಗಳು, ನಗದು ರಹಿತ ವಹಿವಾಟು ನೀಡುವ ಕಡೆ ಗಮನ ಹರಿಸಬೇಕಾಗಿದೆ ಎಂದರು.
ಸಹಕಾರ ಸಂಸ್ಥೆಗಳು ತಾಂತ್ರಿಕ ಬಳಕೆಯನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕುವ ಮನೋಭಾವನೆಯನ್ನು ಬಿಟ್ಟು ಯುವ ಸಮೂಹವನ್ನು ಸೆಳೆಯುವಂತೆ ಕಾರ್ಯನಿರ್ವಹಿಸಲು ಮುಂದಾದಾಗ ಮಾತ್ರ ಸಹಕಾರ ಸಂಸ್ಥೆಗಳ ಆರ್ಥಿಕತೆ ವೃದ್ಧಿಯಾಗುತ್ತದೆ. ಆದ್ದರಿಂದ ಸಹಕಾರಿ ಸಂಸ್ಥೆಗಳು ಆರ್ಥಿಕ ವೃದ್ಧಿಯೊಂದಿಗೆ ತಾಂತ್ರಿಕತೆ ಹೆಚ್ಚಿಸಿಕೊಳ್ಳಬೇಕಿದೆ. ರೈತರು ಸಹಕಾರಿ ಸಂಸ್ಥೆಗಳಲ್ಲಿ ವಹಿವಾಟುಗಳನ್ನು ನಡೆಸುವುದರಿಂದ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲು ಸಾಧ್ಯವಾಗುತ್ತದೆ ಎಂದ ಅವರು, ತುಮಕೂರು ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ತುಮುಲ್ ಅತಿತೀ ಹೆಚ್ಚು ಆದಾಯ ತೆರಿಗೆಯನ್ನು ಕಟ್ಟುತ್ತಿದೆ. ಯುವ ಸಮೂಹ ಸಹಕಾರದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಹಕಾರಿ ಆಂದೋಲನವನ್ನು ಇನ್ನಷ್ಟು ಶಕ್ತಿಯುತವಾಗಿಸಬೇಕಿದೆ ಎಂದು ಕರೆ ನೀಡಿದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ರಾಜ್ಯದ ಸಹಕಾರ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆಗೆ ಪ್ರಮುಖವಾದ ಸ್ಥಾನವಿದೆ. ಸಹಕಾರ ಧುರೀಣರಾದ ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ ಅವರು ಸಹಕಾರಿ ಕ್ಷೇತ್ರದ ಪ್ರಭಾವಿಗಳಾಗಿದ್ದಾರೆ. ಸಹಕಾರ ರಂಗದಲ್ಲಿ ತುಮಕೂರು ಹಾಲು ಒಕ್ಕೂಟ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಪೇಕ್ಷೆಯಂತೆ ಸಹಾಯ ಮಾಡಬೇಕೆಂಬ ಧ್ಯೇಯದೊಂದಿಗೆ ಆರಂಭಗೊಂಡಿರುವ ಈ ಸಹಕಾರ ರಂಗ ದೇಶದಲ್ಲಿ 6 ಲಕ್ಷ ಸಹಕಾರಿ ಸಂಸ್ಥೆಗಳನ್ನು, 30 ಕೋಟಿ ಸದಸ್ಯರನ್ನು ಹೊಂದಿದ್ದು, ರಾಜ್ಯದ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.
ತುಮಕೂರು ನಗರ ಶಾಸಕ ಡಾ.ರಫೀಕ್ ಅಹ್ಮದ್ ಮಾತನಾಡಿ, ಕಷ್ಟದಲ್ಲಿ ಇರುವಾಗ ಸಹಕಾರಿ ಸಂಸ್ಥೆಗಳು ನೆರವಿಗೆ ಬರುತ್ತವೆ, ನನ್ನ ಮನೆ ನಿರ್ಮಾಣಕ್ಕೆ ರಾಷ್ಟ್ರೀಯ ಬ್ಯಾಂಕ್‍ಗಳಿಂತ ಹೆಚ್ಚಿನ ಸಾಲವನ್ನು ತ್ವರಿತವಾಗಿ ಮಂಜೂರು ಮಾಡಿದ್ದು ಸಹಕಾರ ಬ್ಯಾಂಕ್ ಎನ್ನುವುದನ್ನು ಮರೆತಿಲ್ಲ. ಬ್ಯಾಂಕ್‍ಗಳಿಂತ ಉತ್ತಮ ಸೇವೆಯನ್ನು ನೀಡುತ್ತಿರುವ ಸಹಕಾರ ಸಂಸ್ಥೆಗಳು ನಗದು ರಹಿತ ವಹಿವಾಟು ಪ್ರಾರಂಭಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಶೇಖರಗೌಡ ಮಾಲಿಪಾಟೀಲ, ರಾಜ್ಯ ಸಹಕಾರ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ, ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ, ಬೆಂಗಳೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ.ಡಿ.ನರಸಿಂಹಮೂರ್ತಿ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಗುರುನಾಥ ಕವಟಗಿಮಠ, ರಾಜ್ಯ ಸಹಕಾರಿ ಯೂನಿಯನ್ ನಿರ್ದೇಶಕ ಎನ್.ಗಂಗಣ್ಣ, ರಾಜ್ಯ ಸಹಕಾರ ಮಾರಾಟ ಮಂಡಳ ನಿರ್ದೇಶಕ ಆರ್.ರಾಜೇಂದ್ರ.ತುಮಕೂರು ಗ್ರೇನ್ ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಎನ್.ಆರ್.ಜಗದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







