ಜನವರಿ 1ರಿಂದ ರಾಜ್ಯಾದ್ಯಂತ 500 ಇಂದಿರಾ ಕ್ಯಾಂಟೀನ್‌ಗಳ ಆರಂಭ: ಸಿದ್ದರಾಮಯ್ಯ

ಬೆಂಗಳೂರು, ನ.19: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಇಂದಿರಾಗಾಂಧಿ ಮಹಾನ್ ನಾಯಕಿಯಾಗಿದ್ದು, ಅವರ ಹೆಸರಿನಲ್ಲಿ ಅವರಿಗೆ ಪ್ರಿಯವಾಗಿದ್ದ ಬಡವರ ಹಸಿವು ನೀಗಿಸುವ ಕಾರ್ಯಕ್ರಮವಾಗಿ ರಾಜ್ಯಾದ್ಯಂತ 500 ಇಂದಿರಾ ಕ್ಯಾಂಟಿನ್‌ಗಳನ್ನು ಜ.1ರಿಂದ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 100ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಇಂದಿರಾಗಾಂಧಿ ಮಹಾನ್ ನಾಯಕಿಯಾಗಿದ್ದು, ಅವರ ಹೆಸರಿನಲ್ಲಿ ಅವರಿಗೆ ಪ್ರಿಯವಾಗಿದ್ದ ಬಡವರ ಹಸಿವು ನೀಗಿಸುವ ಕಾರ್ಯಕ್ರಮವಾಗಿ ರಾಜ್ಯಾದ್ಯಂತ 500 ಇಂದಿರಾ ಕ್ಯಾಂಟಿನ್‌ಗಳನ್ನು ಜ.1ರಿಂದ ಆರಂಭಿಸುವುದಾಗಿ ನುಡಿದರು.
ಬಡವರಿಗೆ ನ್ಯಾಯ, ದುರ್ಬಲ ವರ್ಗದವರಿಗೆ ಶಕ್ತಿ, ಅಲ್ಪಸಂಖ್ಯಾತರಿಗೆ ರಕ್ಷಣೆಯಾಗಿದ್ದವರು ಇಂದಿರಾಗಾಂಧಿ. ಬಡತನ ನಿರ್ಮೂಲನೆ ಘೋಷಣೆಯನ್ನು ದೇಶಕ್ಕೆ ಮೊದಲು ಕೊಟ್ಟ ನಾಯಕಿ. ಸಮಸಮಾಜ ನಿರ್ಮಾಣದ ಕನಸು ಕಂಡಿದ್ದರು. ಅಲ್ಪಸಂಖ್ಯಾತರಿಗೆ 15 ಅಂಶದ ಕಾರ್ಯಕ್ರಮವನ್ನು ನೀಡಿದ್ದರು ಎಂದು ಸ್ಮರಿಸಿದರು.
ನಮ್ಮ ಸರಕಾರ ಇಂದಿರಾಗಾಂಧಿ ಅವರ ಗರೀಬಿ ಹಠಾವೋ ಘೋಷಣೆಯಿಂದ ಸ್ಫೂರ್ತಿ ಪಡೆದು ಹಸಿವು ಮುಕ್ತ ಕರ್ನಾಟಕ ಮಾಡಲು ಮುಂದಾಗಿದೆ ಎಂದ ಅವರು, ಇಂದಿರಾಗಾಂಧಿ ಅವರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ಬಡವರಿಗಾಗಿ ಬಾಗಿಲು ತೆರೆದಿದ್ದರು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯ ಮಾಡಿ ಬಡವರ ಪಾಲಿಗೆ ಬ್ಯಾಂಕ್ ಬಾಗಿಲುಗಳನ್ನು ಮುಚ್ಚಿದರು ಎಂದು ವ್ಯಂಗ್ಯವಾಡಿದರು.
ಸತ್ಯದ ಅರಿವು: ರಾಜ್ಯ ಸರಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ವರಿಗೂ ಆರೋಗ್ಯ ಭಾಗ್ಯ ನೀಡಲಿದೆ. ಇದಕ್ಕಾಗಿ ಸಾರ್ವತ್ರಿಕ ಆರೋಗ್ಯ ಯೋಜನೆ ರೂಪುಗೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರು ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಬಿಜೆಪಿ ಸುಳ್ಳು ಹೇಳಿ ತಿರುಗಿದರೆ ನಾವು ಜನರಿಗೆ ಸತ್ಯದ ಅರಿವು ಮೂಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ರಾಜಕಾರಣ ರಕ್ತಗತ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕಾರಣ ರಕ್ತಗತವಾಗಿ ಬಂದಿತ್ತು. ರಾಜಕಾರಣವನ್ನು ಬಹಳ ಹತ್ತಿರದಿಂದ ನೋಡಿ ಬೆಳೆದವರು ಅವರು. ಸ್ವಾತಂತ್ರ್ಯ ಯೋಧರ ಒಡನಾಟ ಇಂದಿರಾಗಾಂಧಿಯವರಿಗೆ ದೊರಕಿತ್ತು. ಇದೆಲ್ಲದರ, ಅನುಭವದಿಂದ ದೇಶದ ಸುಭದ್ರತೆಗೆ ಇಂದಿರಾಗಾಂಧಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು ಎಂದು ಹೇಳಿದರು.
ಭಾರತದ ಉಕ್ಕಿನ ಮಹಿಳೆಯಾಗಿದ್ದ ಅವರು ಎಂಥದ್ದೇ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಗಟ್ಟಿ ತೀರ್ಮಾನ ಕೈಗೊಳ್ಳುತ್ತಿದ್ದರು. ಬಾಂಗ್ಲಾ ವಿಭಜನೆ ವೇಳೆ ಇಂದಿರಾಗಾಂಧಿಯವರು ತೆಗೆದುಕೊಂಡ ತೀರ್ಮಾನ ಜಗತ್ತಿಗೇ ಮಾದರಿಯಾಗಿತ್ತು. ದುಷ್ಟಶಕ್ತಿಗಳ ನಿರ್ಮೂಲನಕ್ಕೆ ಅವರು ದುಡಿದಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.







