ಫೇಸ್‍ಬುಕ್‍ನಲ್ಲಿ ಧರ್ಮ ನಿಂದನೆ : ದೂರು ದಾಖಲು

ಮಡಿಕೇರಿ,ನ.19 :ಸಾಮಾಜಿಕ ತಾಣವಾದ ಫೇಸ್‍ಬುಕ್ ನಲ್ಲಿ ಕುಂತೀಪುತ್ರ ಎಂಬ ಹೆಸರಿನ ಖಾತೆಯಲ್ಲಿ ಇಸ್ಲಾಂ ಧರ್ಮ ಹಾಗೂ ಮಹಮ್ಮದ್ ಪೈಗಂಬರರ ಬಗ್ಗೆ ಅವಹೇಳನ ಮಾಡಿರುವ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವ ಕಾಂಗ್ರೆಸ್ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ ಅವರು ನಾಪೋಕ್ಲು ಠಾಣೆಯಲ್ಲಿ ದೂರು ದಾಖಲಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ಫೇಸ್‍ಬುಕ್ ಖಾತೆಯಲ್ಲಿ ಇಸ್ಲಾಂ ಹಾಗೂ ಮುಸಲ್ಮಾನರನ್ನು ಅವಹೇಳನಕಾರಿಯಾಗಿ ನಿಂದಿಸಲಾಗಿದ್ದು, ಇದನ್ನು ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.
ಯುವ ಜನತೆ ಸಾಮಾಜಿಕ ಜಾಲತಾಣಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕೆ ಹೊರತು ಧರ್ಮ ನಿಂದನೆಯ ಮೂಲಕ ಶಾಂತಿ ಕದಡುವ ಕಾರ್ಯಕ್ಕೆ ಮುಂದಾಗಬಾರದು ಎಂದು ಶಾಫಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿದರೆ ಅಥವಾ ಧರ್ಮನಿಂದನೆಯಾದರೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ತನಿಖೆ ನಡೆಸಬೇಕು ಮತ್ತು ಸಮಾಜ ಘಾತುಕ ಶಕ್ತಿಗಳನ್ನು ಬಂಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಪ್ರಾವಿತ್ರ್ಯತೆ ಇರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಅರಿತಾಗ ಮಾತ್ರ ಸಮಾಜದಲ್ಲಿ ಧರ್ಮ ಗೌರವ ಮತ್ತು ಧರ್ಮ ರಕ್ಷಣೆಯಾಗಲು ಸಾಧ್ಯವೆಂದು ಶಾಫಿ ಅಭಿಪ್ರಾಯಪಟ್ಟಿದ್ದಾರೆ.
ದೂರು ಸಲ್ಲಿಸುವ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರಾದ ಹ್ಯಾರಿಸ್, ಮುಸ್ತಫ, ಸಿರಾಜ್ ಹಾಗೂ ರಾಶಿದ್ ಹಾಜರಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







