ವಾರಣಾಸಿ: ನಿರ್ಲಕ್ಷ್ಯಕ್ಕೊಳಗಾಗುತ್ತಿದೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಸ್ಮಾರಕ

ವಾರಣಾಸಿ, ನ. 19: ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಜನ್ಮ ಸ್ಮಾರಕವನ್ನು ನಿರ್ಲಕ್ಷಿಸಲಾಗಿದೆ. ರವಿವಾರ ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ಜನ್ಮ ದಿನ.
ಲಕ್ಷ್ಮೀಬಾಯಿ ಅವರ ಸ್ಮಾರಕ ಕಗ್ಗತ್ತಲಲ್ಲಿ ಬಿದ್ದುಕೊಂಡಿದೆ. ಕಳೆದ ಕೆಲವು ವಾರಗಳ ಹಿಂದೆ ಈ ಸ್ಮಾರಕದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಈ ವಿದ್ಯುತ್ ಸಂಪರ್ಕ ಅನಧಿಕೃತ. ಆದುದರಿಂದ ಕಡಿತಗೊಳಿಸಲಾಗಿದೆ ಎಂದು ವಿದ್ಯುತ್ ಇಲಾಖೆ ಹೇಳಿದೆ.
ಈ ಸ್ಮಾರಕದ ಜವಾಬ್ದಾರಿ ವಹಿಸುವಂತೆ ಆಯುಕ್ತರು, ಜಿಲ್ಲಾ ದಂಡಾಧಿಕಾರಿ, ನಗರಾಡಳಿತಕ್ಕೆ ನಾವು ಮನವಿ ಮಾಡಿದ್ದೇವೆ ಎಂದು ಕೆಲವು ಸಾಮಾಜಿಕ ಹೋರಾಟಗಾರರು ಹೇಳಿದ್ದಾರೆ.
ಈ ನಡುವೆ, ನಗರಾಡಳಿತದ ಅಡಿಯಲ್ಲಿ ಈ ಸ್ಮಾರಕ ಬಂದ ಬಳಿಕ ನಾವು ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿದೆವು. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸ್ಮಾರಕದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ತಿಳಿಸಿದ್ದಾರೆ.
ನಗರಾಡಳಿತಕ್ಕೆ ಹಸ್ತಾಂತರಿಸುವ ಮುನ್ನ ಈ ಸ್ಮಾರಕವನ್ನು ಉತ್ತರಪ್ರದೇಶ ಪ್ರವಾಸೋದ್ಯಮ ಇಲಾಖೆ ನೋಡಿಕೊಳ್ಳುತ್ತಿತ್ತು.





