ನೀತಿ ಸಂಹಿತೆಗೆ ಮೊದಲೇ ಧರ್ಮ ಸ್ಥಾಪನೆಗೆ ಶಿಫಾರಸ್ಸು ಸಲ್ಲಿಸಲು ಆಗ್ರಹ
ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ

ಬೆಂಗಳೂರು, ನ.19: ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಕುರಿತು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಶಿಫಾರಸ್ಸು ಸಲ್ಲಿಸಬೇಕು ಎಂದು ಲಿಂಗಾಯತ ಧರ್ಮೀಯರ ಸಮಾವೇಶ ಒಕ್ಕೊರಲಿನ ನಿರ್ಣಯ ಮಂಡಿಸಿದೆ.
ರವಿವಾರ ನಗರದ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯ ಮಂಡನೆ ಮಾಡಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲಿಂಗಾಯತ ಧರ್ಮ ಮಹಾ ಸಭಾದ ಸಂಸ್ಥಾಪಕಿ ಮಾತೆ ಮಹಾದೇವಿ, ಲಿಂಗಾಯತ ಹಾಗೂ ವೀರಶೈವ ಎರಡೂ ಬೇರೆ ಬೇರೆಯಾಗಿದ್ದು, ಮೈಸೂರು ಮತ್ತು ಮದ್ರಾಸ್ ಪ್ರಾಂತ್ಯಗಳಿದ್ದ ಸಂದರ್ಭದಲ್ಲಿ ಮಾಡಿರುವ ಗೆಜೆಟೆಡ್‌ನಲ್ಲಿ ವೀರಶೈವ ಒಂದು ಉಪ ಜಾತಿ ಮತ್ತು ಲಿಂಗಾಯತ ಬೇರೆ ಎಂದು ಹೇಳಲಾಗಿದೆ. ಆದರೆ, ಲಿಂಗಾಯತ ಧರ್ಮ ಸ್ವೀಕಾರ ಮಾಡಿರುವ ಕೆಲವು ವೀರಶೈವರು ಲಿಂಗಾಯತ-ವೀರಶೈವ ಒಂದೇ ಎಂದು ವಾದಿಸುತ್ತಿದ್ದಾರೆ ಎಂದು ಹೇಳಿದರು.
ಲಿಂಗಾಯತರು ಯಾವುದೇ ಒಂದು ಪಂಥಕ್ಕೆ ಸೀಮಿತವಲ್ಲ ಹಾಗೂ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸುತ್ತಾರೆ. ಅಲ್ಲದೆ, ತನ್ನದೇ ಆದ ಸಿದ್ಧಾಂತ, ಸಂಸ್ಕಾರವನ್ನು ಆಚರಿಸಿಕೊಂಡು ಬರುತ್ತಿದೆ. ವರ್ಣಾಶ್ರಮ ಪದ್ಧತಿ ಮೀರಿ, ಜಾತ್ಯತೀತತೆಯನ್ನು ಲಿಂಗಾಯತ ಧರ್ಮ ಪಾಲಿಸುತ್ತಿದೆ ಎಂದ ಅವರು, ವೀರಶೈವ ಎಂಬ ಪದ ಲಿಂಗಾಯತದೊಂದಿಗೆ ಇದ್ದರೆ ನಮಗೆ ಸ್ವತಂತ್ರ ಮಾನ್ಯತೆ ಸಿಗುವುದಿಲ್ಲ. ಆಗಮ ಆಧಾರಿತವಾದುದು ವೀರಶೈವರಾದರೆ, ವಚನ ಆಧಾರಿತವಾದುದು ಲಿಂಗಾಯತರು ಎಂದು ಪ್ರತಿಪಾದಿಸಿದರು.
ಅಪಪ್ರಚಾರ ಸಲ್ಲ: ಬ್ರಿಟಿಷ್ ಆಡಳಿತ ಅವಧಿಯಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಎಂದು ಮಾನ್ಯ ಮಾಡಿರುವ ಅನೇಕ ದಾಖಲೆಗಳಿವೆ ಎಂದ ಅವರು, ಸ್ವಾತಂತ್ರ ಪೂರ್ವದಲ್ಲಿ ಲಿಂಗಾಯತರ ಧರ್ಮ ಸ್ವತಂತ್ರವಾಗಿತ್ತು. ಆದರೆ, ಸ್ವಾತಂತ್ರ ಬಂದ ಮೇಲೆ ಲಿಂಗಾಯತರಿಗೆ ಸ್ವತಂತ್ರವಿಲ್ಲದಾಗಿದೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಕೇಳುವ ಮೂಲಕ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳನ್ನು ಕಸಿದುಕೊಳ್ಳುವ ಹುನ್ನಾರ ಮಾಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾವು ನಮ್ಮ ಹಕ್ಕನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಅವರು ಹೇಳಿದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಬಸವಣ್ಣ ಒಂದು ಶ್ರೇಷ್ಠ ಧರ್ಮವನ್ನು ಹುಟ್ಟು ಹಾಕಿದ್ದಾರೆ. ಅನುಭವ ಮಂಟಪದ ಮೂಲಕವೂ ಮೊಟ್ಟ ಮೊದಲ ಬಾರಿಗೆ ಪ್ರಜಾತಂತ್ರ ವ್ಯವಸ್ಥೆಯ ಪರಿಕಲ್ಪನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬಸವ ಧರ್ಮ ಜಾಗತಿಕ ಧರ್ಮವಾಗಬೇಕಿತ್ತು. ಬಸವ ಸಂಸ್ಕೃತಿ ಜಾಗತಿಕ ಸಂಸ್ಕೃತಿಯಾಗಬೇಕಿತ್ತು. ಆದರೆ, ಅವಕಾಶಗಳನ್ನು ಕಳೆದುಕೊಂಡೆವು. ಇದೀಗ 21 ಶತಮಾನದಲ್ಲಿ ಮತ್ತೆ ಅದೇ ಕೂಗು ಕೇಳಿ ಬರುತ್ತಿದೆ. ಹೀಗಾಗಿ, ಹೊಸ ಧರ್ಮ ಸ್ಥಾಪನೆಗೆ ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ, ಇರುವ ಧರ್ಮಕ್ಕೆ ಮಾನ್ಯತೆ ಕೊಡಬಹುದು ಎಂದು ಹೇಳಿದರು.
ಮೈಸೂರು ಸಂಸ್ಥಾನದ 1821ರಲ್ಲಿ ನಡೆದ ಪ್ರಥಮ ಜಾತಿಗಣತಿ ಸಂದರ್ಭದಲ್ಲಿ ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳಲಾಗಿದೆ. ಆದರೆ, 1881 ರಲ್ಲಿ ನಡೆದ ಜಾತಿಗಣತಿಯಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ರಂಗಾಚಾರಲು ಲಿಂಗಾಯತರನ್ನು ಹಿಂದೂ ಧರ್ಮದಲ್ಲಿ ಸೇರಿಸಿದರು. ಅಷ್ಟೇ ಅಲ್ಲದೆ, ಶೂದ್ರರನ್ನಾಗಿ ಮಾಡಿದರು. ಲಿಂಗಾಯತ ಧರ್ಮದಲ್ಲಿದ್ದ 21 ಉಪ ಜಾತಿಗಳನ್ನು ಒಡೆದು 6 ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಬಸವರಾಜು ಹೊರಟ್ಟಿ, ಯಡಿಯೂರಪ್ಪ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಅರ್ಜಿ ಸಲ್ಲಿಸಿದ್ದೆವು. ಮೂರು ಬಾರಿ ತಿರಸ್ಕಾರಗೊಂಡಿದೆ ಎಂದ ಅವರು, ಎಲ್ಲಿಯವರೆಗೆ ವೀರಶೈವ ಎಂಬ ಪದವು ಇರುತ್ತದೆಯೋ ಅಲ್ಲಿಯವರೆಗೂ ಸ್ವತಂತ್ರ ಧರ್ಮ ಮಾನ್ಯತೆ ಸಿಗುವುದಿಲ್ಲ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಬೇಲಿ ಮಠದ ಶಿವರುದ್ರ ಸ್ವಾಮಿ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜಯ್ಯ, ಪಂಚಮಸಾಲೆ ಪೀಠದ ಬಸವ ಮೃತ್ಯುಂಜಯ ಸ್ವಾಮಿ, ಶಂಕರ ದೇವರ ಗುರುಪೀಠ ಸಿದ್ಧಬಸವ ಕಬೀರ ಸ್ವಾಮಿ, ಸಚಿವ ವಿನಯ್ ಕುಲಕರ್ಣಿ, ಚಿತ್ರನಟ ಚೇತನ್, ಶಾಸಕ ಮಲ್ಲಿಕಾರ್ಜುನ ಕೂಬ, ವಿಚಾರವಾದಿ ಕೆ.ಎಸ್.ಭಗವಾನ್, ಸಿ.ಎಸ್.ದ್ವಾರಕಾನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮುಂದಿನ ವರ್ಷ ಮಾರ್ಚ್‌ನಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಅದಕ್ಕೂ ಮೊದಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸುವ ಕುರಿತು ಚರ್ಚೆ ನಡೆಸುತ್ತೇವೆ. ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಐದು ಮನವಿಗಳು ಬಂದಿವೆ. ಅದರಲ್ಲಿ ಮೂರು ಮನವಿಗಳು ಒಂದೇ ವಿಷಯಕ್ಕೆ ಸಂಬಂಧಿಸಿದೆ. ಪಂಚಮಪೀಠದಿಂದ 2ಎ ಗೆ ಸೇರಿಸುವಂತೆ ಮನವಿ ನೀಡಿದ್ದಾರೆ. ಮುಖ್ಯಮಂತ್ರಿಯ ಜೊತೆ ನಾವು ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸುವುದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ.
-ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವ
ದೇವರಿಗೆ ಬಸವಣ್ಣ ಕನ್ನಡ ಕಲಿಸಿದ:
ಕರ್ನಾಟಕದಲ್ಲಿ ಜನ್ಮ ತಾಳಿದ ಧರ್ಮ ಲಿಂಗಾಯತ ಧರ್ಮ. ದೇವರಿಗೆ ಕನ್ನಡ ಕಲಿಸಿದ್ದು ಬಸವಣ್ಣ. ಹಿಂದೆ ಎಲ್ಲ ಸಂಸ್ಕೃತದಲ್ಲಿ ಆರಾಧಿಸುತ್ತಿದ್ದರು. ಆದರೆ, ಬಸವಣ್ಣ ಕನ್ನಡದ ಈ ನೆಲದ ಭಾಷೆ. ನಾನು ಅದೇ ಭಾಷೆಯಲ್ಲಿ ಆರಾಧಿಸುತ್ತೇನೆ. ನಿಮಗೆ ಸಾಧ್ಯವಾದರೆ, ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಕರೆ ಕೊಟ್ಟಿದ್ದ ಬಸವಣ್ಣ.
-ಮಾತೆ ಮಹಾದೇವಿ ಲಿಂಗಾಯ ಧರ್ಮ ಮಹಾ ಸಭಾದ ಸಂಸ್ಥಾಪಕಿ
ನಿರ್ಣಯಗಳು:
ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆ ನೀಡಲು ಶಿಫಾರಸ್ಸು ಸಲ್ಲಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತ ಎಂದು ಮಾನ್ಯತೆ ನೀಡಬೇಕು. ಬಸವಣ್ಣರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು. ಎಸ್.ಎಂ.ಕೃಷ್ಣ ಸರಕಾರದ ಅವಧಿಯಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಸಮುದಾಯದ ಉಪ ಪಂಗಡಗಳನ್ನು ವೀರಶೈವ ಲಿಂಗಾಯತ ಎಂದು ನಮೂದು ಮಾಡಲು ನೀಡಿರುವ ಸುತ್ತೋಲೆಯನ್ನು ಹಿಂಪಡೆಯಬೇಕು. ಕಲಬುರ್ಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.







