ಯಕ್ಷಗಾನವು ಅಚ್ಚ ಕನ್ನಡ ಕಲೆ: ಪೇಜಾವರ ಶ್ರೀ
18 ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ

ಉಡುಪಿ, ನ.19: ಹೆಸರಿಗೆ ಮಾತ್ರ ಕರ್ನಾಟಕ ಎಂದಿರುವ ಕರ್ನಾಟಕ ಸಂಗೀತದಲ್ಲಿ ತಮಿಳೇ ತುಂಬಿಹೋಗಿದೆ. ಭರತನಾಟ್ಯದಲ್ಲೂ ಕನ್ನಡ ಇಲ್ಲ ವಾಗಿದೆ. ಆದರೆ ಅಚ್ಚ ಕನ್ನಡ ಕಲೆಯಾಗಿ ಉಳಿದಿರುವುದು ಯಕ್ಷಗಾನ ಕಲೆ ಮಾತ್ರ. ಇದು ಕರ್ನಾಟಕದ ಕಲೆಯಾಗಿರುವುದರಿಂದ ಕನ್ನಡಿಗರು ಇದನ್ನು ಪ್ರೋತ್ಸಾಹಿಸಬೇಕು ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಶ್ರೀಕೃಷ್ಣ ಮಠದ ರಾಜಾ ಗಂಣದಲ್ಲಿ ರವಿವಾರ 18 ಮಂದಿ ಯಕ್ಷಗಾನ ಕಲಾವಿದರು ಹಾಗೂ ಕಲಾ ಸಂಸ್ಥೆಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
ಇಂದು ಮಂಗಳೂರು ಕಡೆ ಬಡಗುತಿಟ್ಟು ಹಾಗೂ ಈ ಕಡೆ ತೆಂಕುತಿಟ್ಟು ಮತ್ತು ಉತ್ತರ ಕನ್ನಡದಲ್ಲಿ ಎರಡೂ ತಿಟ್ಟುಗಳು ಇಲ್ಲವೇ ಇಲ್ಲ. ಆದರೆ ಉಡುಪಿ ಯಲ್ಲಿ ಮಾತ್ರ ಇಂದಿಗೂ ಎಲ್ಲ ಕಲಾಪ್ರಕಾರಗಳು ಇವೆ. ಎಲ್ಲ ತಿಟ್ಟುಗಳಿಗೂ ಸಮಾನ ಅವಕಾಶವನ್ನು ನೀಡುವ ಕ್ಷೇತ್ರ ಉಡುಪಿ ಮಾತ್ರ ಎಂದರು.
ಇಂದು ಎಲ್ಲ ಮೇಳಗಳು ಬೆಳೆಯುತ್ತಿವೆ. ಇದು ಇಲ್ಲಿಯ ಜನತೆ ಯಕ್ಷಗಾನ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸಾಕ್ಷಿ. ಅದೇ ರೀತಿ ಹೊಸ ಹೊಸ ಕಲಾವಿದರು ಕೂಡ ಯಕ್ಷಗಾನದಲ್ಲಿ ಸಿದ್ಧರಾಗುತ್ತಿದ್ದಾರೆ. ಒಟ್ಟಾರೆ ಯಕ್ಷಗಾನ ಕಲೆಯು ಅಕ್ಷಯ ಕಲೆಯಾಗಿ ಬೆಳೆಯುತ್ತಿದೆ ಎಂದು ಅವರು ತಿಳಿಸಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಸನಾತನ ಸಂಸ್ಕೃತಿಯ ಪರಿಚಯಕ್ಕೆ ಬೇಕಾಗಿರುವ ಮುಖ್ಯ ಆಕಾರಗಳಂದರೆ ಮಹಾಭಾರತ, ರಾಮಾಯಣ, ಪುರಾಣಗಳು. ಅದು ಇಂದಿಗೂ ಜೀವಂತ ವಾಗಿರುವುದು ಯಕ್ಷಗಾನ ಕಲೆಯಲ್ಲಿ ಮಾತ್ರ ಎಂದು ಹೇಳಿದರು.
16 ಮಂದಿ ಹಿರಿಯ ಯಕ್ಷಗಾನ ಕಲಾವಿದರುಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ, ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಯಕ್ಷ ಚೇತನ ಪ್ರಶಸ್ತಿ ಮತ್ತು ಬ್ರಹ್ಮಾವರ ಅಜಪುರ ಯಕ್ಷಾಗನ ಸಂಘಕ್ಕೆ ‘ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ಯನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ‘ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ ಯನ್ನು ಅಜಪುರ ಯಕ್ಷಗಾನ ಸಂಘದ ಅಧ್ಯಕ್ಷ ಬಿರ್ತಿ ಬಾಲಕೃಷ್ಣ ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕಿನ ಜನರಲ್ ಮೆನೇಜರ್ ನಾಗ ರಾಜ್ ರಾವ್ ಬಿ., ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿ ರಾಜ ಹೆಗ್ಡೆ, ಹಾದಿಗಲ್ಲು ಶ್ರೀಅಭಯ ಲಕ್ಷ್ಮೀನರಸಿಂಹ ದೇವಸ್ಥಾನದ ಧರ್ಮ ದರ್ಶಿ ಲಕ್ಷ್ಮೀನಾರಾಯಣ ಹಾದಿಗಲ್ಲು, ಕೊಪ್ಪ ಸಹಕಾರ ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎನ್.ಮಹೇಶ್ ಅಡಿಗ, ದಾನಿ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ನಾರಾಯಣ ಹೆಗಡೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೆಂಕತಿಟ್ಟಿನ ಪ್ರಸಿದ್ಧ ಕಲಾವಿದ ರಿಂದ ‘ವಿಶ್ವಾಮಿತ್ರ ಮೇನಕೆ’ ಯಕ್ಷಗಾನ ಪ್ರದರ್ಶನ ನಡೆಯಿತು.







