ವಿವಿಧ ಕ್ಷೇತ್ರಗಳಲ್ಲಿ ಕೊಂಕಣಿಗರ ಕೊಡುಗೆ ಅಪಾರ: ಪ್ರೊ.ಕೆ.ಭೈರಪ್ಪ

ಮಂಗಳೂರು, ನ. 19: ವ್ಯಾಪಾರ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸ್ಥಾಪನೆ ಸಹಿತ ಉದ್ಯಮ ಕ್ಷೇತ್ರದಲ್ಲಿ ಕೊಂಕಣಿಗರ ಕೊಡುಗೆ ಅಪಾರವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಭೈರಪ್ಪ ಹೇಳಿದ್ದಾರೆ.
ನಗರದ ಶಕ್ತಿನಗರದಲ್ಲಿರುವ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ವಿಶ್ವ ಕೊಂಕಣಿ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ರವಿವಾರ ನಡೆದ ಪಂಜೆ ಮಂಗೇಶ್‌ರಾವ್ ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಕೊಂಕಣಿಗರಿಗೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನವಿದೆ. ಕೊಂಕಣಿ ಸಮುದಾಯದವರು ಶ್ರಮ ಜೀವಿಗಳು. ಲೆಕ್ಕಚಾರದ ಮನುಷ್ಯರಾದರೂ ಮೋಸ ಮಾಡುವವರಲ್ಲ. ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆ ಸಹಿತ ಉದ್ಯಮ ಕ್ಷೇತ್ರದಲ್ಲೂ ಅವರ ಸಾಧನೆ ಅಪಾರವಾಗಿದೆ ಎಂದರು.ಕೊಂಕಣಿಗರು ತಮ್ಮ ಮಾತೃಭಾಷೆಕ್ಕಿಂತ ಹೆಚ್ಚಾಗಿ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದ್ದರ ಪರಿಣಾಮ ಕನ್ನಡ ಸಾಹಿತ್ಯ ಶ್ರೀಮಂತಿಕೆಯ ಮಜಲುಗಳನ್ನು ಏರುವಲ್ಲಿ ಯಶಸ್ಸು ಕಂಡಿದೆ. ಮಂಗಳೂರು ವಿವಿ ಕೂಡ ಈ ನಿಟ್ಟಿನಲ್ಲಿ ಕಳೆದ ವರ್ಷ ಎಂಎ ಕೊಂಕಣಿ ಪದವಿಯನ್ನು ಆರಂಭ ಮಾಡಿ ಯಶಸ್ಸಿನಿಂದ ಮುಂದೆ ಸಾಗುತ್ತಿದೆ. ಕೊಂಕಣಿ ಅಧ್ಯಯನ ಪೀಠದ ಮೂಲಕನೂ ಸಾಕಷ್ಟು ಸಂಶೋಧನೆ, ಅಧ್ಯಯನಗಳು ನಡೆಯುತ್ತಿದೆ ಎಂದು ಪ್ರೊ.ಕೆ. ಭೈರಪ್ಪ ಹೇಳಿದರು.
ಮಲಯಾಳಂ ಬರಹಗಾರ ಎನ್.ಎಸ್. ಮಾಧವನ್ ಮಾತನಾಡಿ, ಮಕ್ಕಳಿಗೆ ಸಾಹಿತ್ಯದ ಕುರಿತು ಒಲವು ಮೂಡಿಸುವಂತಹ ವಾತಾವರಣದ ಕೊರತೆ ಎದ್ದು ಕಾಣತ್ತದೆ. ಇದರಿಂದಾಗಿ ಮಕ್ಕಳ ಸಾಹಿತ್ಯ ಕ್ಷೀಣವಾಗುತ್ತಿದೆ. ಸಾಹಿತ್ಯ ಓದುವ ಪರಿಪಾಟ, ವಾತಾವರಣ ಮಕ್ಕಳಿಗೆ ಸಿಗುವಂತಾಗಬೇಕು ಎಂದರು.ಕೊಂಕಣಿ ಶ್ರೀಮಂತಿಕೆಯ ಭಾಷೆಗೋವಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ವರುಣ್ ಸಹಾನಿ ಮಾತನಾಡಿ, ಕೊಂಕಣಿ ಬಹಳ ಶ್ರೀಮಂತಿಕೆಯಿಂದ ಕೂಡಿದ ಭಾಷೆಯಾಗಿದೆ. ಯುರೋಪಿಯನ್ನರು ಭಾರತಕ್ಕೆ ಬರುವುದಕ್ಕಿಂತಲೂ ಕೊಂಕಣಿಗರು ದೇಶದಲ್ಲಿ ಸುತ್ತಾಟ ಮಾಡುತ್ತಿದ್ದರು. ಕೊಂಕಣಿಯನ್ನು ಪ್ರಬಲ ಭಾಷೆಯಾಗಿ ಬಳಸಿಕೊಂಡು ವ್ಯವಹಾರ ಮಾಡುತ್ತಿರುವ ವಿಚಾರಗಳು ಇತಿಹಾಸದಲ್ಲಿ ದಾಖಲಾಗಿದೆ ಎಂದರು.
ಭಾಷೆ, ಸಾಹಿತ್ಯ, ಸಂಸ್ಕೃತಿಯ ಅರಿವು ಮೂಡಿಸಲು ಮಕ್ಕಳ ಸಾಹಿತ್ಯದ ಅಗತ್ಯವಿದೆ. ಮಕ್ಕಳ ಸಾಹಿತ್ಯಕ್ಕೆ ಪೂರಕ ವಾತಾವರಣದ ನಿರ್ಮಾಣ ಆಗಬೇಕು. ಪ್ರಶ್ನಿಸುವ ಮನೋಭಾವವನ್ನು ಜಾಗೃತಗೊಳಿಸಿ, ವಿಚಾರ ಮಂಡನೆಗೆ ಅವಕಾಶ ಕಲ್ಪಿಸಬೇಕು ಎಂದವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಶ್ವಕೊಂಕಣಿ ಕೇಂದ್ರದಿಂದ ಪ್ರಕಟಗೊಂಡ ಮೂವರು ಬರಹಗಾರರ ಕೊಂಕಣಿ ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಸಾಹಿತ್ಯ ಅಕಾಡಮಿಯ ಕೊಂಕಣಿ ಸಲಹಾ ಸಮಿತಿಯ ಸಂಯೋಜಕ ತಾನಾಜಿ ಹರ್ಲಂಕರ್, ವಿಶ್ವಕೊಂಕಣಿ ಕೇಂದ್ರದ ಬಿ.ಆರ್.ಭಟ್, ಬೋಳಂತೂರು ಪ್ರಭಾಕರ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಕಿರಣ್ ಬುಡ್ಕುಲೆ ಪರಿಚಯಿಸಿದರು. ಶಕುಂತಲಾ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳ ಸಾಹಿತ್ಯ ವಿಚಾರದಲ್ಲಿ ವಿವಿ ಗಣ್ಯರಿಂದ ಉಪನ್ಯಾಸ, ಸಂವಾದ ಕಾರ್ಯಕ್ರಮಗಳು ನಡೆದವು.







