ಪದ್ಮಾವತಿ ವಿವಾದ: ವಸುಂಧರಾ ರಾಜೆಗೆ ಶಬನಾ ತರಾಟೆ

ಮುಂಬೈ, ನ. 19: ಪದ್ಮಾವತಿ ಚಿತ್ರದ ಕುರಿತು ಸಂಜಯ್ ಲೀಲಾ ಬನ್ಸಾಲಿ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಬೆದರಿಕೆ ಒಡ್ಡಿದ ರಜಪೂತ ಸಂಘಟನೆ ಒತ್ತಡಕ್ಕೆ ಮಣಿದಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ನಟಿ ಶಬನಾ ಅಝ್ಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಅವರು ಸುಮ್ಮನೆ ಕುಳಿತುಕೊಂಡಿದ್ದಾರೆ. ಚಿತ್ರ ನಿರ್ಮಾಣಕಾರರಿಗೆ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಹಿಂಸಾಚಾರದ ಬೆದರಿಕೆ ಒಡ್ಡುತ್ತಿರುವ ಕ್ರಿಮಿನಲ್‌ಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಾಗಿ ರಾಜೆ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುತ್ತದೆ. ಆದುದರಿಂದ ಪದ್ಮಾವತಿ ಚಿತ್ರ ಬಿಡುಗಡೆ ವಿಳಂಬ ಮಾಡುವಂತೆ ಕೋರಿದ್ದಾರೆ ಎಂದರು.
ರಾಜಕೀಯದಲ್ಲಿರುವ ಯಾವುದೇ ವ್ಯಕ್ತಿಗಳ ವಿರುದ್ಧ ಇಂತಹ ಬೆದರಿಕೆ ಒಡ್ಡಿದ್ದರೆ, ಅವರ ಪ್ರತಿಕ್ರಿಯೆ ಇದೇ ರೀತಿಯಾಗಿರುತ್ತಿತ್ತೇ ? ಚಿತ್ರೋದ್ಯಮದಲ್ಲಿರುವವರು ದೇಶದ ಇತರ ಪ್ರಜೆಗಳಿಗೆ ಸಮಾನರಲ್ಲವೇ ? ಎಂದು ಅವರು ಪ್ರಶ್ನಿಸಿದ್ದಾರೆ.





