ಜಮ್ಮು ಕಾಶ್ಮೀರ: ಉಗ್ರ ಸಂಘಟನೆ ತ್ಯಜಿಸುವಂತೆ ಮಕ್ಕಳಿಗೆ ತಾಯಂದಿರ ಮನವಿ

ಶ್ರೀನಗರ, ನ. 19: ಹೆತ್ತವ್ವನ ದುಃಖಕ್ಕೆ ಕರಗಿ ಲಷ್ಕರ್ ಎ ತೊಯ್ಬಾ ಸೇರಿದ್ದ ಇಪ್ಪತ್ತರ ಹರೆಯದ ಫುಟ್‌ಬಾಲ್ ಆಟಗಾರ ಮನೆಗೆ ಮರಳಿದ ಬಳಿಕ ಈ ವಲಯದ ಇನ್ನೆರೆಡು ಕುಟುಂಬಗಳು ಇದೇ ರೀತಿ ವೀಡಿಯೋದಲ್ಲಿ ಉಗ್ರ ಸಂಘಟನೆಗೆ ಸೇರಿದ ತಮ್ಮ ಮಕ್ಕಳು ಹಿಂದಿರುಗುವಂತೆ ಭಾವನಾತ್ಮಕವಾಗಿ ಮನವಿ ಮಾಡಿದೆ.
ವ್ಯಾಪಾರಿ ಆಶಿಕ್ ಹುಸೈನ್ ಭಟ್‌ನ ಹೆತ್ತವರು ಮಾಧ್ಯಮವನ್ನು ಸಂಪರ್ಕಿಸಿ ತಮ್ಮ ಪುತ್ರ ಶೋಫಿಯಾನ ಜಿಲ್ಲೆಯಲ್ಲಿರುವ ನಿವಾಸಕ್ಕೆ ಮರಳುವಂತೆ ಸಂದೇಶ ರವಾನಿಸಿದ್ದಾರೆ. ಆಶಿಕ್ ಹುಸೈನ್ ಭಟ್ ಬಂದೂಕು ಪ್ರದರ್ಶಿಸುತ್ತಿರುವ ಭಾವಚಿತ್ರ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಲಷ್ಕರ್ ಎ ತೊಯ್ಬಾಕ್ಕೆ ಸೇರುವ ಉದ್ದೇಶದಿಂದ ಆತ ಕಳೆದ ವಾರ ನಾಪತ್ತೆಯಾಗಿದ್ದ.
ನನ್ನ ಪುತ್ರನ ಭಾವಚಿತ್ರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಅಂದಿನಿಂದ ಅಂದರೆ ನವೆಂಬರ್ 9ರಿಂದ ಆತ ಅಂಗಡಿಯಿಂದ ಹಿಂದಿರುಗಿಲ್ಲ ಎಂದು ಆಶಿಕ್ ಹುಸೈನ್ ಭಟ್‌ನ ತಾಯಿ ಫಹಮೀದ್ ತಿಳಿಸಿದ್ದಾರೆ.
“ಆಶಿಕ್ ಇಲ್ಲದೆ ನಮ್ಮ ಬದುಕಿಗೆ ಅರ್ಥವೇ ಇಲ್ಲ. ಆತ ಹಿಂದಿರುಗುವುದನ್ನು ನಾನು ಬಯಸುತ್ತೇನೆ. ಅವನಿಲ್ಲದಿದ್ದರೆ ನಾವಿಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಥವಾ ಮನೆಗೆ ಬೀಗ ಹಾಕಿ ಎಲ್ಲಿಗಾದರೂ ಪರಾರಿಯಾಗುತ್ತೇವೆ” ಎಂದು ಅವರು ಹೇಳಿದ್ದಾರೆ.
ಇನ್ನೋರ್ವ ಪುಲ್ವಾಮದ 20ರ ಹರೆಯದ ಹಣ್ಣು ಬೆಳೆಗಾರ ಮಂಜೂರ್ ಅಹ್ಮದ್ ಬಾಬಾ. ಈತ ಇತ್ತೀಚೆಗೆ ಭಯೋತ್ಪಾದಕ ಸಂಘಟನೆಗೆ ಸೇರಿದ್ದ.
“ಒಂದು ವೇಳೆ ಆತ ನಿಮ್ಮ ಸಂಘಟನೆಯಲ್ಲಿದ್ದರೆ, ದಯವಿಟ್ಟು ಅವನನ್ನು ಹೋಗಲು ಬಿಡಿ. ನನ್ನ ಮಕ್ಕಳ ಹೊರತಾಗಿ ನನಗೆ ಯಾರೂ ಇಲ್ಲ” ಎಂದು ಮಂಜೂರ್ ಅಹ್ಮದ್ ಬಾಬಾನ ತಾಯಿ ಝೌರಾ ಬಾನು ಹೇಳಿದ ವೀಡಿಯೊ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.







