ಮಹಾದಾಯಿಗಾಗಿ ನ.20ರಂದು ದೆಹಲಿ ಚಲೋ
ಬೆಂಗಳೂರು, ನ. 19: ಕಳಸಾ-ಬಂಡೂರಿ ನೀರಾವರಿ ಯೋಜನೆಯನ್ನು ಜಾರಿ ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ಜನ ಸಾಮಾನ್ಯರ ವೇದಿಕೆಯು ನ.20ರಂದು ದೆಹಲಿ ಚಲೋ ಅಭಿಯಾನ ಹಮ್ಮಿಕೊಂಡಿದೆ. ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳು ಜನಹಿತವನ್ನು ಮರೆತಿವೆ. ಅವುಗಳ ಕಣ್ಣು ತೆರೆಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ವೇದಿಕೆಯ ಅಧ್ಯಕ್ಷ ಡಾ.ಅಯ್ಯಪ್ಪ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಜನತೆಗೆ ಕುಡಿಯುವ ನೀರು ನೀಡುವ ಯೋಜನೆಯನ್ನು ಮೂರು ದಶಕಗಳಿಂದ ಪೂರ್ಣಗೊಳಿಸಲು ಆಗಿಲ್ಲ. ನೀರಿನ ಬವಣೆ ನಿವಾರಿಸುವ ಇಚ್ಛಾಶಕ್ತಿ ರಾಜಕೀಯ ನಾಯಕರಲ್ಲಿ ಇಲ್ಲ. ಬದಲಿಗೆ ಹೋರಾಟದ ತೀವ್ರತೆಯನ್ನು ಕುಂದಿಸುತ್ತಿದ್ದಾರೆ. ಜನ ನೀರಿಗಾಗಿ ಪರದಾಡಿದರೆ, ಜನಪ್ರತಿನಿಧಿಗಳು ರಾಜಕೀಯ ಲಾಭ ಪಡೆಯುವಲ್ಲಿ ಮಗ್ನರಾಗಿದ್ದಾರೆ ಎಂದು ದೂರಿದ್ದಾರೆ.
ರಾಜ್ಯದ ರಾಜಕೀಯ ನಾಯಕರು ಈ ಯೋಜನೆಯ ಅನುಷ್ಠಾನಕ್ಕೆ ಮುತುವರ್ಜಿ ತೋರುತ್ತಿಲ್ಲ. ಹಾಗಾಗಿ ಕೇಂದ್ರದ ಗಮನ ಸೆಳೆಯಲು ವೇದಿಕೆಯ 50 ಸದಸ್ಯರ ತಂಡ ದೆಹಲಿಗೆ ತೆರಳುತ್ತಿದೆ. ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಹಾಗೂ ಪ್ರಧಾನಮಂತ್ರಿಗಳ ಗಮನ ಸೆಳೆಯಲು ಪ್ರಯತ್ನಿಸುತ್ತೇವೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಮಂತ್ರಿಗಳನ್ನು ನ.21ರಂದು ಭೇಟಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಳಸಾ-ಬಂಡೂರಿ-ಮಲಪ್ರಭಾ ಜೋಡಣಾ ಹೋರಾಟ ಯುವ ಸಮಿತಿಯ ಅಧ್ಯಕ್ಷರಾದ ಜಯ ಕುಲಕರ್ಣಿ, ಸದಸ್ಯರಾದ ಸತೀಶ್, ಅಮೃತ್ ಹಜಾರೆ, ಶೋಭಾ ಚಲವಾದಿ, ಇಮಾನ್‌ಸಾಬ್ ಅವರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.







