'ಮೀನುಗಾರ ಮಹಿಳೆಯರ ಸಾಲದ ಸಬ್ಸಿಡಿ ಬಾಕಿ 12 ಕೋಟಿ ರೂ. ತಕ್ಷಣ ಬಿಡುಗಡೆ'
ಉಡುಪಿಯಲ್ಲಿ ಸಿದ್ದರಾಮಯ್ಯ ಘೋಷಣೆ

ಉಡುಪಿ, ನ.19: ಮೀನುಗಾರ ಮಹಿಳೆಯರಿಗೆ ವಿವಿಧ ಸಹಕಾರಿ ಸಂಘಗಳಿಂದ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ನೀಡಲಾಗುವ ಸಾಲದ ಮೇಲಿನ ಬಡ್ಡಿಯ ಸಹಾಯಧನದ ಬಾಕಿ 12 ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಹಣಕಾಸು ಇಲಾಖೆಗೆ ಆದೇಶ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಮಹಿಳಾ ಮೀನುಗಾರರ ಸಹಕಾರಿ ಸಂಘಗಳ ಸಹಯೋಗದೊಂದಿಗೆ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದ ಮುಂಭಾಗದಲ್ಲಿ ಇಂದು ಸಂಜೆ ನಡೆದ ಮಹಿಳಾ ಮೀನುಗಾರರ ಸಮಾವೇಶವನ್ನು ಉದ್ಘಾಟಿಸಿ, ಜಿ.ಶಂಕರ್ ಅವರು ನೀಡಿದ ವಿವಿಧ ಮನವಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಕುಂದಾಪುರ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ನಿರ್ಮಿಸುವ ಅತ್ಯಾಧುನಿಕ ಸೌಲಭ್ಯಗಳನ್ನೊ ಳಗೊಂಡ 100 ಹಾಸಿಗೆಗಳ ಸುಸಜ್ಜಿತ ದಿ.ಲಕ್ಷ್ಮಿ ಸೋಮ ಬಂಗೇರ ಹೆರಿಗೆ ವಿಭಾಗಕ್ಕೆ ಶಿಲಾನ್ಯಾಸವನ್ನೂ ಮುಖ್ಯಮಂತ್ರಿಗಳು ನೆರವೇರಿಸಿದರು.
ಮೀನುಗಾರ ಸಮುದಾಯದ ಮೊಗವೀರ ಸೇರಿದಂತೆ 39 ಉಪಜಾತಿಗಳನ್ನು ಈಗಿರುವ ಪ್ರವರ್ಗ 1ರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತಂತೆ ಶಿಫಾರಸ್ಸು ಮಾಡಿ ಈಗಾಗಲೇ ಎರಡು ಬಾರಿ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದರೂ, ಅಲ್ಲಿಂದ ವಾಪಾಸಾಗಿದೆ. ಮತ್ತೊಮ್ಮೆ ಅದನ್ನು ಕೂಡಲೇ ಕಳುಹಿಸಲು ಕ್ರಮ ವಹಿಸಿ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಅಲ್ಲದೇ ಈಗಾಗಲೇ ಮೀನುಗಾರರ ಸಮುದಾಯದ ಅಭಿವೃದ್ಧಿಗೆಂದು ಸ್ಥಾಪಿಸಲಾಗಿರುವ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್‌ನಲ್ಲಿ 100 ಕೋಟಿ ರೂ.ಗಳನ್ನು ತೆಗೆದಿರಿಸಲಾಗುವುದು ಎಂದೂ ಮುಖ್ಯಮಂತ್ರಿಗಳು ಪ್ರಕಟಿಸಿದರು.
ನಮ್ಮದು ನುಡಿದಂತೆ ನಡೆಯುವ ಸರಕಾರವಾಗಿದ್ದು, ರಾಜ್ಯದ ಜನತೆಗೆ ನೀಡಿರುವ ಹೆಚ್ಚಿನೆಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎಂದ ಅವರು ನಾನು ಹಿಂದುಳಿದ ವರ್ಗದಿಂದ ಬಂದವನು. ನನ್ನನ್ನು ಅಹಿಂದ ಮುಖ್ಯಮಂತ್ರಿ ಎಂದು ಟೀಕೆ ಮಾಡುತ್ತಾರೆ. ಇದರಿಂದ ನನಗೆ ಯಾವುದೇ ನಾಚಿಕೆ ಇಲ್ಲ, ಹೆದರಿಕೆಯ ಇಲ್ಲ. ಅವಕಾಶವಂಚಿತರಿಗೆ ಬೇಕಾದ ಸೌಲಭ್ಯ ನೀಡುವುದು ನನ್ನ ಕರ್ತವ್ಯ ಎಂದು ತಿಳಿದಿದ್ದೇನೆ ಎಂದರು. ಆದುದರಿಂದಲೇ ಮೀನುಗಾರರಿಗೆ ಬೇಕಾದ ಎಲ್ಲಾ ಸೌಲಭ್ಯ ನೀಡಲು ನಾನು ಸಿದ್ಧ ಎಂದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಅವರು ಮೀನುಗಾರರ ಪರವಾಗಿ ಬೇಡಿಕೆಗಳ ಮನವಿಯನ್ನು ಓದಿ ಮುಖ್ಯಮಂತ್ರಿಗಳಿಗೆ ಅರ್ಪಿಸಿದರು. ಇದರಲ್ಲಿ ಜಿಲ್ಲೆಯನ್ನು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಮೂರರಿಂದ ಎರಡಕ್ಕೆ ಇಳಿಸುವಂತೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಮನವಿಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಅವರು ಓದಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ ಮಧ್ವರಾಜ್ ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಕಾಪು ಶಾಸಕ ವಿನಯಕುಮಾರ್ ಸೊರಕೆ, ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉದ್ಯಮಿ ಕೋಟದ ಆನಂದ ಸಿ. ಕುಂದರ್, ಯಶ್ಪಾಲ್ ಸುವರ್ಣ ಹಾಗೂ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ ಕಾಂಚನ್ ಸ್ವಾಗತಿಸಿದರೆ, ಜಿ.ಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.







