ಪತ್ರಿಕಾಗೋಷ್ಠಿ ನಡೆಸದ ದೇಶದ ಮೊದಲ ಪ್ರಧಾನಿ ಮೋದಿ: ಕಪಿಲ್ ಸಿಬಲ್
“ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಅವರಿಗಿಲ್ಲ”

ಹೊಸದಿಲ್ಲಿ, ನ. 19: ಮುಂಬರುವ ಗುಜರಾತ್ ವಿಧಾನ ಸಭೆ ಚುನಾವಣೆಗೆ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಗುಜರಾತ್ ಹಾಗೂ ಕೇಂದ್ರದ ಆಡಳಿತಾರೂಡ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಹಾಗೂ ಅಭಿವೃದ್ಧಿಯ ಯಾವುದಾದರೂ ವಲಯದಲ್ಲಿ ಗುಜರಾತ್ ಸ್ಥಾನ ಪಡೆದುಕೊಂಡಿದೆಯೇ ಎಂಬುದನ್ನು ಸಾಬೀತುಪಡಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಮ್ಮೊಂದಿಗೆ ಚರ್ಚೆಯಲ್ಲಿ ಭಾಗಿಯಾಗಲಿ ಎಂದು ಸವಾಲು ಹಾಕಿದ್ದಾರೆ.
ಯಾವುದಾದರು ವಲಯದಲ್ಲಿ ಗುಜರಾತ್ ಮುಂಚೂಣಿಯ ಸ್ಥಾನ ಪಡೆದುಕೊಂಡಿರುವ ಬಗ್ಗೆ ಅಮಿತ್ ಶಾ ಚರ್ಚೆ ನಡೆಸಿ ಸಾಬೀತುಪಡಿಸಲಿ ಎಂದು ನಾನು ಸವಾಲು ಹಾಕುತ್ತೇನೆ ಎಂದು ಗುಜರಾತ್‌ನ ವಡೋದರಾದಲ್ಲಿ ವಕೀಲರು, ವ್ಯಾಪಾರಿಗಳು, ಬುದ್ಧಿಜೀವಿಗಳನ್ನು ಒಳಗೊಂಡ ಸಭಿಕರೊಂದಿಗೆ ಸಂವಹನ ನಡೆಸುತ್ತಾ ಅವರು ಹೇಳಿದರು.
ಮೋದಿ ಅವರು ಭಾಷಣ ಮಾಡುವಾಗ ನೀಡುವ ಅಂಕಿ-ಅಂಶ ಸತ್ಯವಿರಬಹುದು ಅಥವಾ ಸುಳ್ಳಿರಬಹುದು ಎಂದು ಅವರು ಆರೋಪಿಸಿದರು. ನಗದು ನಿಷೇಧ, ಜಿಎಸ್‌ಟಿ, ಆರ್ಥಿಕತೆ, ಅಭಿವೃದ್ಧಿ ಮೊದಲಾದ ವಿಭಿನ್ನ ವಿಷಯಗಳ ಬಗ್ಗೆ ಮೋದಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸಿಬಲ್, ವಿರೋಧ ಪಕ್ಷವನ್ನು ದಮನಿಸಲು ಅವರು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿ ನಡೆಸದ ದೇಶದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದ ಅವರು, ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಮೋದಿಗೆ ಇಲ್ಲ ಎಂದರು.
ಮೋದಿ ಅವರು ಭಾರತದ ಕುರಿತು ದೃಷ್ಟಿಕೋನದ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ತನ್ನ ನಿಜವಾದ ದೃಷ್ಟಿಕೋನ ಏನು ಎಂಬುದು ಅವರಿಗೇ ಗೊತ್ತಿಲ್ಲ ಎಂದು ಸಿಬಲ್ ವ್ಯಂಗ್ಯವಾಡಿದರು.







