ಜಪ್ಪಿನಮೊಗರು: ಗ್ರೀನ್ ವಾರಿಯರ್ಸ್ ಸ್ವಚ್ಛತಾ ಅಭಿಯಾನ

ಮಂಗಳೂರು, ನ.19: ನಗರದ ಹೊರವಲಯದ ಜಪ್ಪಿನಮೊಗರಿನಲ್ಲಿ ಕ್ರಿಯಾಶೀಲ ಮಕ್ಕಳೇ ರೂಪಿಸಿಕೊಂಡಿರುವ ‘ಗ್ರೀನ್ ವಾರಿಯರ್ಸ್’ ತಂಡದ ನೇತೃತ್ವದಲ್ಲಿ ರವಿವಾರ ಜಪ್ಪಿನಮೊಗರು ಪರಿಸರದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ನಡೆಯಿತು. ಮಕ್ಕಳ ಈ ಸ್ವಚ್ಛತಾ ಕಾರ್ಯಕ್ಕೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕೈಜೋಡಿಸಿದ್ದು ರಸ್ತೆ ಬದಿಗಳಲ್ಲಿ ಬಿದ್ದಿದ್ದ ಕಸ, ತ್ಯಾಜ್ಯಗಳನ್ನು ತೆಗೆದು ಪರಿಸರವನ್ನು ಸ್ವಚ್ಛಗೊಳಿಸಿದರು.
ಗ್ರೀನ್ ವಾರಿಯರ್ಸ್ ತಂಡದ ಮಕ್ಕಳ ಕಾರ್ಯದಿಂದ ಪ್ರೇರಿತರಾದ ಊರಿನ ಮಕ್ಕಳೂ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸುಮಾರು 25ಕ್ಕೂ ಅಧಿಕ ಚಿಣ್ಣರ ಸಹಿತ ನೂರಕ್ಕೂ ಅಧಿಕ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.
ಸ್ಥಳೀಯ ಕಾರ್ಪೊರೇಟರ್ ಸುರೇಂದ್ರ ಪಾಲಿಕೆಯ ವಾಹನ, ಕಸ ಸಂಗ್ರಹಿಸುವ ಸ್ವಯಂ ಸೇವಕರಿಗೆ ಗ್ಲೌಸ್, ಮಾಸ್ಕ್ ಮತ್ತಿತರ ವ್ಯವಸ್ಥೆ ಮಾಡಿದ್ದರು. ಸ್ಥಳೀಯ ಅರಸು ಫ್ರೆಂಡ್ಸ್ ಎಸೋಸಿಯೇಶನ್, ಆದಿಮಾಯೆ ಕ್ರಿಕೆಟರ್ಸ್, ಶಾರ್ದೂಲ್ಯ ಸೇವಾ ಸಂಘ, ಶ್ರೀರಾಮ ಸ್ಪೋರ್ಟ್ಸ್, ವಿಶ್ವ ಹಿಂದೂ ಪರಿಷತ್, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಸಂಗಮ್ ಫ್ರೆಂಡ್ಸ್, ಬಂಟರ ಸಂಘಗಳು ಸಹಕಾರ ನೀಡಿದ್ದವು.
ಪರಿಸರ ಪ್ರೇಮಿ ಮಾಧವ ಉಳ್ಳಾಲ, ಸುರತ್ಕಲ್ ಜೆಸಿಐನ ಸಂಪತ್ ಕುಮಾರ್, ಗ್ರೀನ್ ವಾರಿಯರ್ಸ್ ತಂಡದ ರೂವಾರಿ ಬಾಲಕಿ ಹನಿ ಮತ್ತಿತರರಿದ್ದರು.







