ಮಾನುಷಿ ಮಿಸ್ ವರ್ಲ್ಡ್ ಆದದ್ದು 'ಬೇಟಿ ಬಚಾವೋ' ಆಂದೋಲನದ ಯಶಸ್ಸು ಎಂದ ಹರ್ಯಾಣ ಸಚಿವೆ!

ಚಂಡಿಗಡ,ನ.19: ಹರ್ಯಾಣದ ಚೆಲುವೆ ಮಾನುಷಿ ಚಿಲ್ಲರ್(20) ಅವರು ವಿಶ್ವಸುಂದರಿ ಮುಕುಟವನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ ಇನ್ನೊಂದು ಪ್ರಶಸ್ತಿಗಾಗಿ ಭಾರತದ 17 ವರ್ಷಗಳ ಕಾಯುವಿಕೆಗೆ ಮಂಗಳ ಹಾಡಿರುವುದಕ್ಕೆ ಪ್ರಶಂಸಾ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರಿಂದ ಹಿಡಿದು ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಮತ್ತು ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ವರೆಗೆ ಗಣ್ಯರು ಮಾನುಷಿಯನ್ನು ಅಭಿನಂದಿಸಿದ್ದಾರೆ.
ಬಿಜೆಪಿ ನಾಯಕಿ ಹಾಗೂ ಹರ್ಯಾಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕವಿತಾ ಜೈನ್ ಅವರು ಮಾನುಷಿಯನ್ನು ಅಭಿನಂದಿಸಿ ತನ್ನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದು, ಮಾನುಷಿಯ ಗೆಲುವು ಹಲವಾರು ಯುವತಿಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದಿದ್ದಾರೆ. ಮಾನುಷಿಯನ್ನು ‘ಹರ್ಯಾಣದ ಪುತ್ರಿ’ ಎಂದು ಕರೆದಿರುವ ಅವರು, ಆಕೆ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ಹೆಮ್ಮೆಯನ್ನುಂಟು ಮಾಡಿದ್ದಾರೆ ಎಂದು ಹೊಗಳಿದ್ದಾರೆ. ಕೇಂದ್ರದ ‘ಬೇಟಿ ಬಚಾವೋ,ಬೇಟಿ ಪಢಾವೋ’ ಆಂದೋಲನವನ್ನು ಪ್ರಸ್ತಾಪಿಸಿರುವ ಜೈನ್, ಈ ಅಭಿಯಾನವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಮಾನುಷಿಯ ಗೆಲುವು ತೋರಿಸಿದೆ ಎಂದಿದ್ದಾರೆ.
ಸೋನಿಪತ್‌ನ ಭಗತ್ ಫೂಲ್ ಸಿಂಗ್ ಸರಕಾರಿ ಮಹಿಳಾ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಮಾನುಷಿ ಅವರಿಗೆ ಚೀನಾದ ಬೀಜಿಂಗ್‌ನ ಸಾನ್ಯಾ ಸಿಟಿ ಅರೆನಾದಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2016ನೇ ಸಾಲಿನ ವಿಶ್ವಸುಂದರಿ ಸ್ಟೆಫಾನಿ ಡೆಲ್ ವ್ಯಾಲೆ ಅವರು ಈ ಸಾಲಿನ ವಿಶ್ವಸುಂದರಿ ಕಿರೀಟವನ್ನು ತೊಡಿಸಿದ್ದರು.
ಪ್ರಶ್ನೆ ಸುತ್ತಿನ ಸ್ಪರ್ಧೆಯಲ್ಲಿ ಮಾನುಷಿ ನೀಡಿದ್ದ ಉತ್ತರ ಅವರನ್ನು ವಿಶ್ವಸುಂದರಿ ಪಟ್ಟಕ್ಕೇರಿಸಿತ್ತು. ನಿಮ್ಮ ಅಭಿಪ್ರಾಯದಲ್ಲಿ ಅತ್ಯಂತ ಹೆಚ್ಚಿನ ವೇತನಕ್ಕೆ ಅರ್ಹವಾದ ವೃತ್ತಿ ಯಾವುದೆಂದು ಅವರಿಗೆ ಪ್ರಶ್ನಿಸಲಾಗಿತ್ತು. ‘‘ತಾಯಿ ಅತ್ಯಂತ ಹೆಚ್ಚಿನ ಗೌರವಕ್ಕೆ ಅರ್ಹಳಾಗಿದ್ದಾಳೆ. ಹಣವೇ ಯಾವಾಗಲೂ ಮುಖ್ಯವಲ್ಲ, ನಾವು ಯಾರಿಗಾದರೂ ತೋರಿಸುವ ಪ್ರೀತಿ ಮತ್ತು ಗೌರವವೂ ಮುಖ್ಯವಾಗಿರುತ್ತದೆ. ನನ್ನ ತಾಯಿ ನನಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಅತ್ಯಂತ ಹೆಚ್ಚಿನ ವೇತನಕ್ಕೆ ತಾಯಿ ಹುದ್ದೆಯು ಅರ್ಹವಾಗಿದೆ’’ ಎಂದು ಮಾನುಷಿ ಉತ್ತರಿಸಿದ್ದರು.
ಮಾನುಷಿ ವಿಶ್ವಸುಂದರಿ ಪಟ್ಟಕ್ಕೇರಿದ ಆರನೇ ಭಾರತೀಯ ಚೆಲುವೆಯಾಗಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ವಿಶ್ವಸುಂದರಿಯಾದ 17 ವರ್ಷಗಳ ಸುದೀರ್ಘ ವಿರಾಮದ ಬಳಿಕ ಭಾರತಕ್ಕೆ ಈ ಅದೃಷ್ಟ ಮತ್ತೆ ಖುಲಾಯಿಸಿದೆ. ಪ್ರಿಯಾಂಕಾಗಿಂತ ಮುನ್ನ ಯುಕ್ತಾಮುಖಿ ಅವರು ಭಾರತಕ್ಕೆ ಈ ಗೌರವವನ್ನು ತಂದಿದ್ದರು.
ಡಯಾನಾ ಹೇಡನ್(1997), ಐಶ್ವರ್ಯಾ ರೈ(1994) ಮತ್ತು ರೀಟಾ ಫಾರಿಯಾ(1996) ಅವರು ವಿಶ್ವಸುಂದರಿ ಪಟ್ಟಕ್ಕೇರಿದ್ದ ಇತರ ಭಾರತೀಯ ಮಹಿಳೆ ಯರಾಗಿದ್ದಾರೆ.







