ಲಿಂಗಾಯತರ ಹೋರಾಟ ಬ್ರಾಹ್ಮಣ್ಯ,ಸಂಘ ಪರಿವಾರದ ವಿರುದ್ಧ: ನಟ ಚೇತನ್

ಬೆಂಗಳೂರು, ನ.19: ಲಿಂಗಾಯತರ ಹೋರಾಟ ಹಿಂದೂ ಧರ್ಮದ ವಿರುದ್ಧವಲ್ಲ, ಹಿಂದುತ್ವದ ವಿರುದ್ಧ. ಬ್ರಾಹ್ಮಣರ ವಿರುದ್ಧವಲ್ಲ ಬ್ರಾಹ್ಮಣ್ಯದ ವಿರುದ್ಧ, ಸಂಘಟನೆ ವಿರುದ್ಧವಲ್ಲ, ಸಂಘ ಪರಿವಾರದ ವಿರುದ್ಧ ಎಂದು ಚಿತ್ರ ನಟ ಚೇತನ್ ಹೇಳಿದ್ದಾರೆ.
ರವಿವಾರ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ವೀರಶೈವ ಒಂದಾಗಲು ಸಾಧ್ಯವಿಲ್ಲ. ಕತ್ತಲೆಯ ಜೊತೆ ಬೆಳಕು ಒಂದಾಗಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದರು. ನಮ್ಮ ಬಗ್ಗೆ ನಾವು ತಿಳಿದುಕೊಳ್ಳದಿದ್ದರೆ ರಾಜಕೀಯ ವ್ಯಕ್ತಿಗಳು ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಒಂದು ಧರ್ಮದ ಶ್ರೇಷ್ಠತೆ ಗುರುತಿಸಬೇಕು ಎಂದರೆ ಪರಿಣಾಮಾತ್ಮಕ ಮಾತ್ರವಲ್ಲ, ಗುಣಾತ್ಮಕವಾಗಿ ಕಾಣಬೇಕು. ಒಂದು ಧರ್ಮದಲ್ಲಿ ಎಷ್ಟು ಭಕ್ತರು, ಅನುಯಾಯಿಗಳಿದ್ದಾರೆ, ಎಷ್ಟು ದೇಶದಲ್ಲಿ ಧರ್ಮವಿದೆ ಎಂಬುದು ಮುಖ್ಯವಲ್ಲ. ಎಷ್ಟು ಸಮಾನತೆ, ತರ್ಕ ಬದ್ಧವಾದ ಯೋಚನೆ, ಸಾಮಾಜಿಕ ನ್ಯಾಯವಿದೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಬೌದ್ಧ ಧರ್ಮದ ಜೊತೆಗೆ ಲಿಂಗಾಯತ ಧರ್ಮವನ್ನು ಕಾಣಬಹುದಾಗಿದೆ ಎಂದರು.
ಬಿಜೆಪಿ ಶಾಸಕರಿಗೆ ಲಿಂಗಾಯತ ಸಮುದಾಯದ ಬಗ್ಗೆ ಕಾಳಜಿಯಿದ್ದರೆ ತಮ್ಮ ಪಕ್ಷದ ಮುಖಂಡರ ಬಳಿ ಹೋಗಿ ತಮ್ಮ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡಿ ಎಂದು ಕೇಳಲಿ. ಅದು ಅಸಾಧ್ಯ ಎಂದು ತಿಳಿದರೆ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಕ್ರಿಶ್ಚಿಯನ್ ಧರ್ಮಗಳಿಗಿರುವ ಮಾನ್ಯತೆ ರದ್ಧು ಮಾಡುವಂತೆ ಒತ್ತಾಯ ಮಾಡಿ. ಅದು ಸಮಾನತೆಯಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಮಾತನಾಡಿ, ಸಂವಿಧಾನ ರಚನಾ ಸಭೆಯಲ್ಲಿಯೂ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಚರ್ಚೆಯಾಗಿತ್ತು. ಅದರಂತೆ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂಕೋಡ್ ಬಿಲ್ ಮಂಡನೆಗೆ ಮುಂದಾದಾಗ ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಡನೆಯಾಗಿರಲಿಲ್ಲ. ನಂತರದಲ್ಲಿ ಆ ಕೋಡ್ ಬಿಲ್ 4 ಭಾಗಗಳಾಗಿ ಮಾಡಿ ಅಂಗೀಕರಿಸಲಾಗಿದ್ದು, 2ನೆ ಭಾಗದಲ್ಲಿ ಹಿಂದೂ ಧರ್ಮದ ವ್ಯಾಖ್ಯಾನ ನೀಡುವಾಗ ಲಿಂಗಾಯತ, ವೀರಶೈವ, ಬೌದ್ಧ, ಜೈನ, ಸಿಖ್ ಎಲ್ಲರನ್ನೂ ಹಿಂದೂ ಎಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ ಎಂದು ವಿವರಿಸಿದರು.
ಈ ನಿಟ್ಟಿನಲ್ಲಿ 1963ರಲ್ಲಿ ಸಿಖ್ಖರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲಾಗಿದೆ. 1993ರಲ್ಲಿ ಬೌದ್ಧರಿಗೆ ಹಾಗೂ 2014ರಲ್ಲಿ ಜೈನ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ ಧಾರ್ಮಿಕ ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗಿದೆ. ಇನ್ನು ವೀರಶೈವರು ಹಾಗೂ ಲಿಂಗಾಯತರು ಬೇರೆ ಬೇರೆ ಎಂದು ಸಂವಿಧಾನವೇ ತಿಳಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.







