ದಕ್ಷಿಣ ವಲಯ ಅಂತರ್ ವಿವಿ ಮಹಿಳಾ ಕಬಡ್ಡಿ: ತಮಿಳುನಾಡು ಮದರ್ ತೆರೆಸಾ ವಿನ್ನರ್ಸ್, ಮಂಗಳೂರು ವಿ.ವಿ ರನ್ನರ್ಸ್

ಮೂಡುಬಿದಿರೆ, ನ.19: ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಕಬಡ್ಡಿ ಟೂರ್ನಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ತಮಿಳುನಾಡಿನ ಮದರ್ ತೆರೆಸಾ ಮಹಿಳಾ ವಿಶ್ವವಿದ್ಯಾನಿಲಯ ತಂಡವು ಈ ವರ್ಷ ಕೂಡ ವಿನ್ನರ್ಸ್ ಆಗಿ ಮೂಡಿಬಂದಿದೆ. ಕಳೆದ ವರ್ಷದ ರನ್ನರ್ ಅಪ್ ಅತಿಥೇಯ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ರನ್ನರ್ ಆಪ್ ಪ್ರಶಸ್ತಿಯನ್ನು ಮತ್ತೊಮ್ಮೆ ಪಡೆದುಕೊಂಡಿದೆ.
ಕೇರಳ ವಿ.ವಿ. ತೃತೀಯ ಹಾಗೂ ತಮಿಳುನಾಡು ಪಿಸಿಕಲ್ ಎಜುಕೇಶನ್- ಸ್ಪೋಟ್ಸ್ ವಿ.ವಿ. ಚತುರ್ಥ ಸ್ಥಾನವನ್ನು ಪಡೆದಿದೆ. ಈ ನಾಲ್ಕು ತಂಡಗಳು ಅಖಿಲ ಭಾರತ ಅಂತರ್ ವಿವಿ ಮಹಿಳಾ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಗೊಂಡಿವೆ. ಮಂಗಳೂರು ವಿ.ವಿ.ಯ ತೃಪ್ತಿ ಬೆಸ್ಟ್ ರೈಡರ್, ಕೇರಳ ವಿ.ವಿ.ಯ ವಿದ್ಯಾ ಬೆಸ್ಟ್ ಕ್ಯಾಚರ್ ಹಾಗೂ ಮದರ್ ತೆರೆಸಾ ವಿಶ್ವವಿದ್ಯಾನಿಲಯದ ಸತ್ಯಪ್ರಿಯ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು.
ರೋಚಕ ಫೈನಲ್ ಪಂದ್ಯದಲ್ಲಿ ಮಂಗಳೂರು ಹಾಗೂ ಮದರ್ ತೆರೆಸಾ ತಂಡವು ತಲಾ 26 ಅಂಕಗಳನ್ನು ಪಡೆದು ಟೈ ಅಗಿದ್ದು ಹಿಂದಿನ ಲೀಗ್ ಪಂದ್ಯಗಳ ಒಟ್ಟು ಅಂಕಗಳ ಆಧಾರದಲ್ಲಿ ಮದರ್ ತೆರೆಸಾ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಟೂರ್ನಿಯಲ್ಲಿ 41 ವಿಶ್ವವಿದ್ಯಾನಿಲಯದ ತಂಡಗಳು 57 ಪಂದ್ಯಗಳನ್ನು ಆಡಿದವು.
ಅಂತಾರಾಷ್ಟ್ರೀಯ ಕಬಡ್ಡಿ ಮಾಜಿ ಆಟಗಾರ ಜಗದೀಶ್ ಕುಂಬ್ಳೆ, ಪ್ರೊ. ಕಬಡ್ಡಿ ಆಟಗಾರ ಸಚಿನ್ ಸುವರ್ಣ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಅಭಯಚಂದ್ರ ಜೈನ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್, ದ.ಕ. ಜಿಲ್ಲಾ ಕಬಡ್ಡಿ ಅಸೋಶಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ, ರಾಜೇಶ್ವರಿ ಇನ್ಫ್ರಾಟೆಕ್‌ನ ದೇವಿ ಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.







