ಮರದ ಕೊಂಬೆ ಮೈಮೇಲೆ ಬಿದ್ದು ಗಾಯಗೊಂಡಿದ್ದ ಯುವಕನ ಮೃತ್ಯು
ಪುತ್ತೂರು, ನ. 19: ಮರದ ಕೊಂಬೆ ಕಡಿಯುತ್ತಿದ್ದ ವೇಳೆ ಕೊಂಬೆ ಮೈಮೇಲೆ ಮುರಿದು ಬಿದ್ದು ಗಂಭೀರ ಗಾಯಗೊಂಡಿದ್ದ ಅವಿವಾಹಿತ ಯುವಕನೊಬ್ಬ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಕೋಡಂದೂರು ಎಂಬಲ್ಲಿ ರವಿವಾರ ಸಂಭವಿಸಿದೆ. ಚಾರ್ವಾಕ ಗ್ರಾಮದ ಕೋಡಂದೂರು ನಿವಾಸಿ ಶೀನಪ್ಪ ಗೌಡ ಅವರ ಪುತ್ರ ವಿಜಯಕುಮಾರ್ (29) ಮೃತಪಟ್ಟ ಯುವಕ.
ಕಳೆದ ನಾಲ್ಕು ದಿನಗಳ ಹಿಂದೆ ವಿಜಯಕುಮಾರ್ ಅವರು ತನ್ನ ಮನೆಯ ಬಳಿಯಿರುವ ಮರವೊಂದನ್ನು ಏರಿ ಕೊಂಬೆಗಳನ್ನು ಕಡಿಯುತ್ತಿದ್ದ ವೇಳೆ ತುಂಡಾದ ಕೊಂಬೆ ಮೈಮೇಲೆಯೇ ಮುರಿದು ಬಿದ್ದು, ನಿಂತಿದ್ದ ಆಧಾರ ಕೊಂಬೆ ಸಹಿತ ಮುರಿತಕ್ಕೊಳಗಾಗಿ ಕೆಳಗೆ ಬಿದ್ದಿದ್ದರು. ಕೊಂಬೆ ಮೈಮೇಲೆಯೇ ಬಿದ್ದ ಪರಿಣಾಮವಾಗಿ ವಿಜಯಕುಮಾರ್ ಅವರು ಕುತ್ತಿಗೆ ಮತ್ತು ಬೆನ್ನಿನ ಭಾಗ ಮುರಿತಕ್ಕೊಳಗಾಗಿತ್ತು.
ಗಂಭೀರ ಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿದ್ದ ವಿಜಯಕುಮಾರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಈ ಹಿನ್ನಲೆಯಲ್ಲಿ ರವಿವಾರ ಅವರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಕಡಬ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





