ತೆಲಂಗಾಣ ಮಾದರಿಯಲ್ಲಿ ಉರ್ದು ಭಾಷೆಗೆ ಪ್ರೋತ್ಸಾಹ: ನಸೀರ್ ಅಹ್ಮದ್
ಅಕ್ಸೆ ಜಮಾಲ್ ಕೃತಿ ಬಿಡುಗಡೆ

ಬೆಂಗಳೂರು, ನ.19: ತೆಲಂಗಾಣ ರಾಜ್ಯದಲ್ಲಿ ಉರ್ದು ಭಾಷೆಗೆ ಎರಡನೆ ಸರಕಾರಿ ಭಾಷೆಯ ಸ್ಥಾನಮಾನ ನೀಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ರಾವ್ ಪ್ರಕಟಿಸಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಉರ್ದು ಭಾಷೆಗೆ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್ ತಿಳಿಸಿದ್ದಾರೆ.
ರವಿವಾರ ನಗರದ ಕೋಲ್ಸ್‌ಪಾರ್ಕ್‌ನಲ್ಲಿರುವ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ನಿವಾಸದಲ್ಲಿ ಮೌಲಾನ ಮುಶರ್ರಫ್ ಜಮಾಲ್ ಖಾಸ್ಮಿ ಅವರ ಉರ್ದು ಕತೆಗಳ ಸಂಗ್ರಹ ಅಕ್ಸೆ ಜಮಾಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತೆಲಂಗಾಣದಲ್ಲಿ ಉರ್ದು ಭಾಷೆಯನ್ನು ಎರಡನೆ ಸರಕಾರಿ ಭಾಷೆಯ ಸ್ಥಾನಮಾನ ನೀಡಲು ಅನುಸರಿಸಲಾಗುತ್ತಿರುವ ಮಾನದಂಡಗಳು, ಉರ್ದು ಭಾಷಿಕರ ಸಂಖ್ಯೆ ಸೇರಿದಂತೆ ಇನ್ನಿತರ ಷಯಗಳ ಕುರಿತು ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು. ಉರ್ದು ಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂದು ಹಲವು ವರ್ಷಗಳ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.
ಸರಕಾರಿ ಉರ್ದು ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಸರಕಾರಿ ಉರ್ದು ಶಾಲೆಗಳಲ್ಲಿ ಮೊದಲನೆ ತರಗತಿಯಿಂದಲೇ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯನ್ನು ಕಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ, ಮಕ್ಕಳು ಅರ್ಧಕ್ಕೆ ಶಾಲೆ ಬಿಡುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ, ಸರಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ನಸೀರ್ ಅಹ್ಮದ್ ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಮಾತನಾಡಿ, ಮೌಲಾನ ಅಬುಲ್ ಕಲಾಂ ಆಝಾದ್ ಅವರ ಇಂಡಿಯಾ ವಿತ್ ಫ್ರೀಡಂ ಪುಸ್ತಕವನ್ನು ಸುಮಾರು 40 ವರ್ಷಗಳ ಕಾಲ ಪ್ರಕಟ ಮಾಡದೆ ಹಾಗೇ ಉಳಿಸಲಾಗಿತ್ತು. ಇಂಗ್ಲಿಷ್ ಭಾಷೆಯಲ್ಲಿರುವ ಈ ಪುಸ್ತಕವನ್ನು ಉರ್ದು ಭಾಷೆಗೆ ತರ್ಜುಮೆ ಮಾಡಿಸಿದ್ದೇನೆ. ಇದರಲ್ಲಿ ಮೌಲಾನ ಆಝಾದ್, ಮಹಾತ್ಮಗಾಂಧಿ, ಜವಾಹರ್‌ಲಾಲ್ ನೆಹರು ಜತೆಗಿನ ಒಡನಾಟ, ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಬ್ರಿಟಿಷರೊಂದಿಗೆ ನಡೆಸಿರುವ ಚರ್ಚೆ, ಮುಸ್ಲಿಮರ ತ್ಯಾಗ, ಬಲಿದಾನ ಎಲ್ಲವೂ ಅಡಕವಾಗಿದೆ ಎಂದರು.
ಮಾಜಿ ರಾಷ್ಟ್ರಪತಿ ಪ್ರಣವ್‌ಮುಖರ್ಜಿ ಅವರಿಂದ ಬೆಂಗಳೂರಿನಲ್ಲಿ ಈ ಪುಸ್ತಕದ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ. ಮುಂದಿನ ವಾರ ಹೊಸದಿಲ್ಲಿಗೆ ತೆರಳುತ್ತಿದ್ದು, ಈ ಸಂಬಂಧ ಚರ್ಚೆ ನಡೆಸುತ್ತೇನೆ. ಮೌಲಾನ ಮುಶರ್ರಫ್ ಜಮಾಲ್ ಓರ್ವ ಧಾರ್ಮಿಕ ವಿದ್ವಾಂಸರಾಗಿದ್ದಾರೆ. ಅವರ ಕತೆಗಳ ಸಾರ ಅತ್ಯುತ್ತಮವಾದದ್ದು. ಇದೇ ಮೊದಲ ಬಾರಿಗೆ ಅವರ ಪುಸ್ತಕ ಹೊರ ಬರುತ್ತಿರುವುದು ಸಂತಸದ ಸಂಗತಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮೌಲಾನ ಮುಶರ್ರಫ್ ಜಮಾಲ್, ಮೌಲಾನ ಹನೀಫ್ ಅಫ್ಸರ್ ಅಝೀಝಿ, ಅಬ್ದುಲ್ ವಹಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







