ಕರಾವಳಿ ಕೋಮು ಪ್ರಾಯೋಗಿಕ ಶಾಲೆ: ಪ್ರೊ.ಕೆ.ಮರುಳಸಿದ್ದಪ್ಪ
ಸೌಹಾರ್ದಕ್ಕಾಗಿ ಕರ್ನಾಟಕ ಆಂದೋಲನ ಸಮಾಲೋಚನಾ ಸಭೆ
ಬೆಂಗಳೂರು, ನ.19: ಪ್ರಜ್ಞಾವಂತರ ನಾಡು ಎನಿಸಿಕೊಂಡಿರುವ ಕರಾವಳಿ ಪ್ರದೇಶ ಇಂದು ಕೋಮುವಾದದ ಪ್ರಯೋಗ ಶಾಲೆಯಾಗಿ ಪರಿವರ್ತನೆಯಾಗುತ್ತಿದೆ ಎಂದು ಹಿರಿಯ ಸಾಹಿತಿ ಹಾಗೂ ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಕೆ.ಮರುಳಸಿದ್ದಪ್ಪ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸೌಹಾರ್ದಕ್ಕಾಗಿ ಕರ್ನಾಟಕ ಆಂದೋಲನ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಕರಾವಳಿಯಲ್ಲಿ 20-25 ವರ್ಷಗಳ ಹಿಂದೆ ಬುದ್ಧಿವಂತಿಕೆ, ವಿವೇಕದಿಂದ ಯೋಚಿಸುವ ಜನರಿದ್ದರು. ಆದರೆ, ಇಂದು ದಕ್ಷಿಣ ಭಾರತ ಕೋಮುವಾದಿ ರಾಜಕಾರಣಕ್ಕೆ ಪ್ರಯೋಗ ಶಾಲೆ ಮಾಡಿಕೊಳ್ಳಲಾಗುತ್ತಿದೆ. ತರುಣ ತರುಣಿಯರು ಮಾತಾಡಲು, ಇಷ್ಟ ಬಂದ ಊಟ ತಿನ್ನಲು, ಬಟ್ಟೆ ಹಾಕಿಕೊಳ್ಳಲು ಸ್ವಾತಂತ್ರ ಇಲ್ಲದಾಗಿದೆ.
ಮನುಷ್ಯ ಮನುಷ್ಯರ ನಡುವೆ ದ್ವೇಷ ತುಂಬುವ ಕೆಲಸ ವ್ಯಾಪಕವಾಗಿ ನಡೆಯುತ್ತಿದ್ದು, ಕೋಮು ದ್ವೇಷ ಬಿತ್ತಲು ಕೆಲವು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ನಡೆಯುವ ಪ್ರಯೋಗಗಳನ್ನು ದೇಶಕ್ಕೆ ಮಾದರಿಯಾಗಿ ತೋರಿಸಲಾಗುತ್ತಿದೆ. ಇಂತಹ ಆತಂಕಕಾರಿ ಸಂದರ್ಭದಲ್ಲಿ ನಾವಿಂದು ಜೀವನ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಧರ್ಮ, ಜಾತಿಗಳ ನಡುವೆ ಘರ್ಷಣೆಗಳ ನಡುವೆಯೇ ಪ್ರಜಾಪ್ರಭುತ್ವ ಎಪ್ಪತ್ತು ವರ್ಷಗಳ ಕಾಲ ಮುಂದುವರಿದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೋಮುವಾದ ಹಾಗೂ ಫ್ಯಾಶಿಸ್ಟ್ ಶಕ್ತಿಗಳು ಬಲವಾಗುತ್ತಿದೆ. 25 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಇಂದಿಲ್ಲ. ಮಾಧ್ಯಮಗಳು ಕೋಮುವಾದ ಶಕ್ತಿಗಳು ಪ್ರಬಲವಾಗಿ ಬೆಳೆಯಲು ನೇರ ಕಾರಣವಾಗುತ್ತಿವೆ ಎಂದು ದೂರಿದರು.
ಫಾರೂಕ್ ಅಬ್ದುಲ್ಲಾ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಜಾಗ ಪಾಕಿಸ್ತಾನಕ್ಕೆ ಸೇರಿದ್ದು ಎಂದು ನೀಡಿರುವ ಹೇಳಿಕೆ ನನ್ನ ಮಟ್ಟಿಗೆ ಸರಿ ಎನಿಸುತ್ತದೆ. ಆದರೆ, ಮಾಧ್ಯಮಗಳು ಆತನನ್ನು ದೇಶದ್ರೋಹಿ ಎಂದು ಬಿಂಬಿಸಿ ಅವರ ಚಾರಿತ್ರವಧೆ ಮಾಡಲು ಮುಂದಾಗಿವೆ. ಈ ಮೂಲಕ ಕೋಮುದ್ವೇಷವನ್ನು ತುಂಬಲು ಮುಂದಾಗಿವೆ ಎಂದು ಅವರು ಕಿಡಿಕಾರಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ಕಾದಂಬರಿ ಆಧಾರಿತ ಸಿನೆಮಾ ಆದ ಪದ್ಮಾವತಿಯನ್ನು ಕೋಮುವಾದಿಗಳು ಅನಗತ್ಯವಾಗಿ ವಿರೋಧ ಮಾಡುತ್ತಿದ್ದಾರೆ. ಅದರಲ್ಲಿ ವಿರೋಧ ಮಾಡುವಂತಹ ಯಾವುದೇ ಅಂಶಗಳಿಲ್ಲ ಎಂದ ಅವರು, ನಾವು ಇಂದು ಯಾವುದನ್ನು ಮಾತನಾಡಬೇಕು ಯಾವುದನ್ನು ಮಾತಾಡಬಾರದು ಎಂಬುದನ್ನು ಮತ್ತೊಬ್ಬರು ನಿರ್ಧರಿಸುತ್ತಿರುವುದು ಆತಂಕಕಾರಿ ವಿಷಯ ಎಂದು ಹೇಳಿದರು.
ಭಾವ ಮತ್ತು ಭೌತಿಕ ಜಗತ್ತು ಇಂದು ಮುಖಾಮುಖಿಯಾಗುವ ಸಮಯ. ಯುವಜನತೆಗೆ ಸಾಮಾಜಿಕ ಮಾಧ್ಯಮವನ್ನು ಹೊಸರೂಪದಲ್ಲಿ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪರ್ಯಾಯ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ನುಡಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ಜನರ ಭಾವನೆಗಳ ಮೇಲೆ ಕೋಮುವಾದಿ ಪಕ್ಷಗಳ ರಾಷ್ಟ್ರೀಯ ನಾಯಕರು ಚೆಲ್ಲಾಟವಾಡುತ್ತಿದ್ದಾರೆ. ಅದನ್ನು ಬಳಸಿಕೊಂಡು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ನಾವೆಲ್ಲಾ ಒಂದಾಗಿ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ಸಮಾಲೋಚನಾ ಸಮಿತಿಯ ಸದಸ್ಯ ಎಸ್.ವೈ.ಗುರುಶಾಂತ್ ಮಾತನಾಡಿ, ರಾಜ್ಯದಲ್ಲಿ ಬೆಳೆಯುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ಸಮ ಸಮಾಜದ ಕನಸು, ಕೋಮು ಸೌಹಾರ್ದತೆಯನ್ನು ಕಟ್ಟುವ ನಿಟ್ಟಿನಲ್ಲಿ ಮುಂದಿನ ವರ್ಷದ ಜ.30 ರಂದು ರಾಜ್ಯದ ಮೂರು ಕಡೆಗಳಿಂದ ಸುಮಾರು 2 ಸಾವಿರ ಕಿ.ಮೀ.ನಷ್ಟು ಬೃಹತ್ ಮಾನವ ಸರಪಳಿ ಕಾರವಾರದಿಂದ ಕೊಡಗು, ವಿಧುರಾಶ್ವಥದಿಂದ ಕೋಲಾರ, ಬಸವಕಲ್ಯಾಣದಿಂದ ಚಾಮರಾಜನಗರ ಮತ್ತು ಬೆಳಗಾವಿಯಿಂದ ಮೈಸೂರಿನವರೆಗೆ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಲಕ್ಷಾಂತರ ವಿದ್ಯಾರ್ಥಿ, ಯುವಜನರು, ಕೃಷಿ ಕೂಲಿ ಕಾರ್ಮಿಕರು, ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಸಿಪಿಐ ಕಾರ್ಯದರ್ಶಿ ಪಿ.ವಿ.ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







