ಖಾಸಗಿ ಲೇವಾದೇವಿದಾರರಿಂದ ಸುಲಿಗೆ: ಆರೋಪ
ಬೆಂಗಳೂರು, ನ.19: ಸರಕಾರ ನಿಗದಿಪಡಿಸಿರುವ ಬಡ್ಡಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿಯನ್ನು ವಿಧಿಸುವ ಮೂಲಕ ಖಾಸಗಿ ಲೇವಾದೇವಿದಾರರು ಬಡ ಆಟೊ ಚಾಲಕರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ.ಮಂಜುನಾಥಗೌಡ ಆರೋಪಿಸಿದ್ದಾರೆ.
ರವಿವಾರ ನಗರದ ಎಚ್‌ಬಿಆರ್ ಲೇಔಟ್‌ನಲ್ಲಿ ಬೆಂಗಳೂರು ಆಟೋಚಾಲಕರ ಸಂಘ ಸಂಸ್ಥೆಗಳ ಒಕ್ಕೂಟ ಆಯೋಜಿಸಿದ್ದ ಖಾಸಗಿ ಫೈನಾನ್ಸ್ ಸಂಸ್ಥೆಗಳಿಂದ ಆಗುತ್ತಿರುವ ಕಿರುಕುಳದ ಕುರಿತು ಮಾಹಿತಿ ನಿಮಯ ಹಾಗೂ ಆಟೊ ಚಾಲಕರಿಗೆ ಕಾನೂನು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಆರ್‌ಟಿಓದಲ್ಲಿ ಆಟೊ ರಿಕ್ಷಾದ ಮೇಲೆ ಐಪಾಥಿಕೇಷನ್ ಎಂಟ್ರಿ ಮಾಡಲು ಫಾರಂ 34 ಜತೆಯಲ್ಲಿ ಸಾಲ ಮಂಜೂರಾತಿ ಪತ್ರ ಹಾಗೂ ಎಷ್ಟು ಸಾಲವನ್ನು ನೀಡಿದ್ದೇವೆ ಎಂಬ ವಿವರವನ್ನು ಪತ್ರದ ಮೂಲಕ ನೀಡಬೇಕು. ಆದರೆ, ಖಾಸಗಿ ಲೇವಾದೇವಿದಾರರು ಇದನ್ನು ನೀಡದೆ ಆದಾಯ ಇಲಾಖೆಗೂ ವಂಚಿಸುತ್ತಾ ಅಕ್ರಮವಾಗಿ ಹಣಕಾಸು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜಾಗೋ ಕರ್ನಾಟಕ ಯುವ ಮತ್ತು ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುಹಮ್ಮದ್ ಸಜ್ಜಾದ್ ಸೇಠ್ ಮಾತನಾಡಿ, ಆಟೊ ಚಾಲಕರಿಗೆ, ಮಾಲಕರಿಗೆ ಸಾಲ ನೀಡುವಾಗ ಸಾಲದ ಹಾಗು ಬಡ್ಡಿಯ ದರ, ಸಾಲದ ಅವಧಿ ಮತ್ತು ಪ್ರತಿ ತಿಂಗಳ ಕಂತಿನ ವಿವರವನ್ನು ಫೈನಾನ್ಸರ್ ಪತ್ರದ ಮುಖಾಂತರ ನೀಡಬೇಕು. ಇದರ ಜೊತೆಗೆ ಪ್ರತಿ ತಿಂಗಳು ಹಣ ಕಟ್ಟುವಾಗ ಪಾಸ್‌ಬುಕ್ ನೀಡಿ ಅದರಲ್ಲಿ ಸಾಲದ ವಿವರವನ್ನು ನಮೂದಿಸಬೇಕು ಎಂದರು.
ಆಟೊ ರಿಕ್ಷಾ ಚಾಲಕರು, ಮಾಲಕರು ಸಾಲದ ಕಂತುಗಳನ್ನು ಕನಿಷ್ಟ 3 ತಿಂಗಳು ಕಟ್ಟದಿದ್ದರೆ ಸಾಲ ಮರುಪಾವತಿ ಕೋರಿ ಎಚ್ಚರಿಕೆ ಪತ್ರ ನೀಡಿ ನಂತರ ನ್ಯಾಯಾಲಯದ ಆದೇಶದಂತೆ ಆಟೊ ರಿಕ್ಷಾವನ್ನು ವಶಪಡಿಸಿಕೊಳ್ಳಬೇಕು. ಆಟೊ ರಿಕ್ಷಾವನ್ನು ಹರಾಜು ಹಾಕುವ ಮುನ್ನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ನಂತರ ವಶಪಡಿಸಿಕೊಂಡ ಆಟೊ ರಿಕ್ಷಾವನ್ನು ನ್ಯಾಯಾಲಯದ ಆದೇಶದಂತೆ ಹರಾಜು ಹಾಬೇಕು ಎಂದು ಅವರು ಹೇಳಿದರು.







