ಗುಜರಾತ್ ಹತ್ಯಾಕಾಂಡದ ವರದಿಗಾಗಿ ಎನ್‌ಡಿಟಿವಿ ವಿರುದ್ಧ ‘ಯೋಜಿತ ಸಮರ’
ಖ್ಯಾತ ಪತ್ರಕರ್ತ ಎನ್. ರಾಮ್

ಹೊಸದಿಲ್ಲಿ, ನ. 19: ಎನ್‌ಡಿಟಿವಿ ಗುಂಪಿನ ವಿರುದ್ಧದ ಸಮರ ಯೋಜಿತವಾದದ್ದು. 2002ರ ಗುಜರಾತ್ ಹತ್ಯಾಕಾಂಡದ ಬಗ್ಗೆ ವಿಸ್ತೃತ ವರದಿ ಮಾಡಿದ ಹಿನ್ನೆಲೆಯಲ್ಲಿ ಎನ್‌ಡಿಟಿವಿ ಗುಂಪಿನ ವಿರುದ್ಧ ಈ ಸಮರ ಸಾರಲಾಯಿತು ಎಂದು ಹೆಸರಾಂತ ಪತ್ರಕರ್ತ ಹಾಗೂ ಹಿಂದೂ ಗ್ರೂಪ್ ಅಧ್ಯಕ್ಷ ಎನ್. ರಾಮ್ ಆರೋಪಿಸಿದ್ದಾರೆ. ಇಂದಿಲ್ಲಿ ಆಯೋಜಿಸಿದ್ದ ಟಾಟಾ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸರಕಾರ ತನ್ನ ರಾಜಕೀಯ ವಿರೋಧಿ ಹಾಗೂ ಮಾಧ್ಯಮವನ್ನು ಮಟ್ಟ ಹಾಕುವ ಕಲೆಯನ್ನು ಕರಗತ ಮಾಡಿಕೊಂಡಿದೆ ಎಂದರು.
ಎನ್‌ಡಿಟಿವಿ ವಿರುದ್ಧದ ತನಿಖೆ ಸೇಡಿನ ಉದ್ದೇಶದಿಂದ ನಡೆದಿದೆ ಎಂಬ ಆರೋಪವನ್ನು ಸರಕಾರ ನಿರಾಕರಿಸಿದೆ. 2011ರಿಂದ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ನಿರಂತರ ತನಿಖೆಯ ಒಂದು ಭಾಗವಾಗಿ ಇದು ನಡೆದಿದೆ ಎಂದು ಅದು ಹೇಳಿದೆ.
ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಆಡಳಿತದ ಅವಧಿಯಲ್ಲಿ 2011ರಿಂದ ಆದಾಯ ತೆರಿಗೆ ಇಲಾಖೆ ಎನ್‌ಡಿಟಿವಿಗೆ ಸಂಬಂಧಿಸಿ ತನಿಖೆ ಆರಂಭಿಸಿತ್ತು ಎಂದು ಸರಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ತನಿಖೆ ಸ್ಪಷ್ಟವಾಗಿ ಯೋಜಿತ. 2002ರಲ್ಲಿ ಗುಜರಾತ್ ಹತ್ಯಾಕಾಂಡದ ಬಗ್ಗೆ ಎನ್‌ಡಿಟಿವಿ ವಿಸ್ತೃತ ವರದಿ ಮಾಡಿರುವುದೇ ಇದಕ್ಕೆ ಕಾರಣ ಎಂದು ಎಂದು ರಾಮ್ ಆರೋಪಿಸಿದ್ದಾರೆ.
ತಾರತಮ್ಯ ನಡವಳಿಕೆ ಹಾಗೂ ರಾಜಕೀಯ ಶತ್ರುಗಳನ್ನು ಗುರಿ ಮಾಡುವುದು ಪ್ರಸಕ್ತ ಆಕ್ಷೇಪಾರ್ಹ ವಿಚಾರ ಎಂದು ನಾನು ಭಾವಿಸುತ್ತೇನೆ. ಹಲವು ಮಾಧ್ಯಮ ಸಹೋದ್ಯೋಗಿಗಳ ಪರವಾಗಿ ನಾನು ಇದನ್ನು ಹೇಳಬಲ್ಲೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎನ್‌ಡಿಟಿವಿ ವಿರುದ್ಧದ ಸಮರ ಎಂದು ಅವರು ಹೇಳಿದರು.
ಸರಕಾರ ಮಾಧ್ಯಮಗಳನ್ನು ಗುರಿ ಮಾಡುವುದು ಭ್ರಷ್ಟ ವ್ಯವಹಾರಕ್ಕಿಂತಲೂ ಕೆಟ್ಟದಾದುದು ಎಂದು ಅವರು ಹೇಳಿದರು. ನಗದು ನಿಷೇಧವನ್ನು ಟೀಕಿಸಿದ ಅವರು, ನಗದು ನಿಷೇಧದ ಸಂದರ್ಭ ಏನು ಹೇಳಲಾಗಿತ್ತು ಹಾಗೂ ಏನು ಸಾಧಿಸಲಾಗಿದೆ ? ಎಂದು ಪ್ರಶ್ನಿಸಿದರು.







