ಮುಸ್ಲಿಮರ ಮೇಲೆ ಬೌದ್ಧ ತೀವ್ರಗಾಮಿಗಳ ದಾಳಿ: ಗಾಲೆ ಉದ್ವಿಗ್ನ

ಕೊಲಂಬೊ,ನ.19: ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಸಿಂಹಳಿ ಬೌದ್ಧ ತೀವ್ರವಾದಿಗಳು ನಡೆಸಿದ ಹಿಂಸಾಚಾರಕ್ಕೆ ಸಾಕ್ಷಿಯಾದ ಗಾಲೆ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಸ್ಥಳಕ್ಕೆ ಧಾವಿಸಿರುವ ಶ್ರೀಲಂಕಾದ ಸೇನಾಪಡೆಗಳು ರವಿವಾರ ಗಸ್ತು ನಡೆಸಿದವು.
ಗಾಲೆ ಜಿಲ್ಪಲೆಯ ಗಿಂಟೊಟಾ ಪಟ್ಟಣದಲ್ಲಿ ಶುಕ್ರವಾರ ವಾಹನ ಅವಘಡದ ಬಳಿಕ ಎರಡು ಗುಂಪುಗಳ ನಡುವೆ ನಡೆದ ಮಾತಿನ ಚಕಮಕಿ ಕೋಮುಘರ್ಷಣೆಯ ರೂಪ ಪಡೆದುಕೊಂಡಿತ್ತು. ಆನಂತರ ಸಿಂಹಳೀಯ ಬೌದ್ಧ ತೀವ್ರವಾದಿಗಳ ಗುಂಪುಗಳು ಮುಸ್ಲಿಂ ಸಮುದಾಯದ ಅಂಗಡಿ, ಮನೆಗಳ ಮೇಲೆ ದಾಳಿ ನಡೆಸಿದ್ದವು. ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದರು.
ಘಟನೆಯಲ್ಲಿ ಕನಿಷ್ಠ 5 ಮಂದಿಯ ಸ್ಥಿತಿ ಗಂಭೀರವಾಗಿದ್ದು, 90ಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಿವೆ.ಶನಿವಾರ ಸಂಜೆಯವರೆಗೂ ನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು.
ಈ ಮಧ್ಯೆ ಶ್ರೀಲಂಕಾ ಗೃಹ ಸಚಿವ ವಜಿರಾ ಅಭಯವರ್ಧನೆ ಸುದ್ದಿಗಾರರ ಜೊತೆ ಮಾತನಾಡಿ, ಕೋಮುಗಲಭೆಯಲ್ಲಿ ಆಗಿರುವ ಹಾನಿಗಳ ಬಗ್ಗೆ ಸಮಗ್ರ ವರದಿಯನ್ನು ಕೇಳಲಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದೆಂದು ತಿಳಿಸಿದ್ದಾರೆ.
ಗಲಭೆಗೆ ಸಂಬಂಧಿಸಿ 19 ಮಂದಿಯನ್ನು ಬಂಧಿಸಲಾಗಿದ್ದು, ಶಂಕಿತ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2014ರ ಜೂನ್‌ನಲ್ಲಿ ಬೌದ್ಧ ತೀವ್ರವಾದಿಗಳು ಹಾಗೂ ಅಲ್ಪಸಂಖ್ಯಾತ ಮುಸ್ಲಿಮರ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಚಟು ಹಲವರು ಗಾಯಗೊಂಡಿದ್ದರು.
ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ 2.10 ಕೋಟಿ ಮುಸ್ಲಿಮರಿದ್ದು, ಒಟ್ಟು ಜನಸಂಖ್ಯೆ ಯ ಶೇ.10ರಷ್ಟಿದ್ದಾರೆ. ಸಿಂಹಳೀಯ ಬೌದ್ಧರು ಶೇ.70ರಷ್ಟಿದ್ದಾರೆ.







