ನೆತ್ತಿಲಪದವು: ಗಾಂಜಾ ಸಾಗಾಟದ ಆರೋಪಿಗಳ ಸೆರೆ

ಮಂಗಳೂರು, ನ.19: ಮಂಜೇಶ್ವರ ಮತ್ತು ಉಪ್ಪಳದಿಂದ ಗಾಂಜಾವನ್ನು ಸಾಗಾಟ ಮಾಡಿ ಕೊಣಾಜೆ ಠಾಣೆಯ ವಿವಿಧ ಕಡೆ ಪೂರೈಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರವಿವಾರ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಉದ್ಯಾವರ ಮಾಡದ ಅಬ್ದುಲ್ ಖಾದರ್ ಮತ್ತು ಅಬ್ದುಲ್ ರಹ್ಮಾನ್ ಕಡಂಬಾರ್ ಬಂಧಿತ ಆರೋಪಿಗಳು. ಇವರಿಂದ 13 ಸಾವಿರ ರೂ. ಮೌಲ್ಯದ 650 ಗ್ರಾಂ ತೂಕದ 9 ಪ್ಯಾಕೆಟ್ ಗಾಂಜಾ, ಮೊಬೈಲ್, ರಿಕ್ಷಾ ವಶಪಡಿಸಿಕೊಳ್ಳಲಾಗಿದೆ.
ಕೊಣಾಜೆ ಇನ್‌ಸ್ಪೆಕ್ಟರ್ ಅಶೋಕ್ ಪಿ., ಎಸ್ಸೈ ರವಿ ಪಿ.ಪವಾರ್, ಎಎಸ್ಸೈ ಸಂಜೀವ, ಪಿಸಿಗಳಾದ ಪ್ರದೀಪ್, ಅಶೋಕ್, ನಾಗರಾಜ್ ಅವರನ್ನು ಒಳಗೊಂಡ ಪೊಲೀಸ್ ತಂಡ ರವಿವಾರ ಮುಂಜಾನೆ ನೆತ್ತಿಲಪದವು ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ರಿಕ್ಷಾ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿತು. ಸಂಶಯಗೊಂಡ ಪೊಲೀಸರು ರಿಕ್ಷಾ ನಿಲ್ಲಿಸಿ ಆರೋಪಿಗಳನ್ನು ಹಿಡಿದು ವಿಚಾರಿಸಿದಾಗ ಗಾಂಜಾ ಸಾಗಾಟ ಮಾಡುತ್ತಿದ್ದುದು ಗಮನಕ್ಕೆ ಬಂತು. ತಕ್ಷಣ ಸೊತ್ತು ವಶಪಡಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಗೊಳಪಡಿಸಲಾಯಿತು. ಈ ಸಂದರ್ಭ ಆರೋಪಿಗಳು ಗಾಂಜಾ ಪೂರೈಕೆ ಮಾಡುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





