2021ರೊಳಗೆ ಚಾಲಕ ರಹಿತ ಕಾರುಗಳನ್ನು ರಸ್ತೆಗಿಳಿಸುವ ಯೋಜನೆ ಹಾಕಿದೆ ಈ ದೇಶ!

ಲಂಡನ್,ನ.19: ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸಲು ಬ್ರಿಟನ್ ಸರಕಾರವು 75 ದಶಲಕ್ಷ ಪೌಂಡ್‌ಗಳ ಆರ್ಥಿಕ ನೆರವನ್ನು ಸದ್ಯದಲ್ಲೇ ಘೋಷಿಸಲಿದೆ ಹಾಗೂ 2021ರೊಳಗೆ ಬ್ರಿಟನ್‌ನ ರಸ್ತೆಗಳಲ್ಲಿ ಚಾಲಕರಹಿತ ಕಾರುಗಳನ್ನು ಓಡಿಸುವ ಯೋಜನೆಯನ್ನು ರೂಪಿಸಿದೆ.
ಬ್ರಿಟನ್‌ನಲ್ಲಿ ಚಾಲಕ ರಹಿತ ಕಾರು ಉತ್ಪಾದನಾ ಉದ್ಯಮದ ವ್ಯಾಪಕ ಬೆಳವಣಿಗೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬ್ರಿಟನ್‌ನ ವಿತ್ತ ಸಚಿವ ಫಿಲಿಪ್ ಹಮ್ಮಿಂಡ್ ಪ್ರಸಕ್ತ ಆರ್ಥಿಕ ನಿಯಮಾವಳಿಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಘೋಷಿಸಲಿದ್ದಾರೆ. 2035ರೊಳಗೆ ಬ್ರಿಟನ್‌ನಲ್ಲಿ ಚಾಲಕರಹಿತ ಕಾರು ಉದ್ಯಮದ ವೌಲ್ಯವು 28 ಶತಕೋಟಿ ಪೌಂಡ್‌ನಷ್ಟಾಗುವುದೆಂದು ಅಂದಾಜಿಸಲಾಗಿದೆ. ಇನ್ನು ಮೂರು ವರ್ಷಗಳೊಳಗೆ ಬ್ರಿಟನ್‌ನ ರಸ್ತೆಗಳಲ್ಲಿ ಚಾಲಕರಹಿತ ಕಾರುಗಳ ಓಡಾಟವನ್ನು ಆರಂಭಿಸುವ ಯೋಜನೆಯನ್ನು ಅದು ಹಮ್ಮಿಕೊಂಡಿದೆ.
ಬ್ರಿಟನ್‌ನ ವಿತ್ತ ಸಚಿವಾಲಯ ರವಿವಾರ ಮುಂದಿನ ಸಾಲಿನ ಬಜೆಟ್‌ನ ಆಯ್ದ ಅಂಶಗಳನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಚಾಲಕರಹಿತ ಕಾರಿಗೆ ಉತ್ತೇಜನ ನೀಡುವ ಹಲವಾರು ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಇಲೆಕ್ಟ್ರಿಕ್ ಕಾರುಗಳಿಗಾಗಿ ಚಾರ್ಜಿಂಗ್ ಪಾಯಿಂಟ್ (ವಿದ್ಯುತ್‌ಪೂರಣ ಕೇಂದ್ರ)ಗಳ ಸ್ಥಾಪನೆಗಾಗಿ 400 ದಶಲಕ್ಷ ಪೌಂಡ್‌ಗಳ ಅನುದಾನವನ್ನು ಕೂಡಾ ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ. ಸಾರಿಗೆಯಲ್ಲಿ ಶೂನ್ಯ ಪ್ರಮಾಣದಲ್ಲಿ ಇಂಗಾಲ ವಿಸರ್ಜನೆಯ ಗುರಿಯನ್ನು ಹಮ್ಮಿಕೊಂಡಿರುವ ಬ್ರಿಟನ್ ಸರಕಾರವು ಬ್ಯಾಟರಿಚಾಲಿತ ಇಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ನಾಗರಿಕರಿಗೆ ಆರ್ಥಿಕ ನೆರವನ್ನೂ ನೀಡುವ ಯೋಜನೆಯನ್ನು ಕೂಡಾ ಬಜೆಟ್‌ನಲ್ಲಿ ಪ್ರಕಟಿಸಲಿದೆ.







