ತುಂಗಾ ಏತ ನೀರಾವರಿ ಯೋಜನೆ ವಿಸ್ತರಣೆಗೆ ಆಗ್ರಹಿಸಿ ಕುಂಸಿ ಗ್ರಾಮಸ್ಥರಿಂದ ನೀರಾವರಿ ಸಚಿವರಿಗೆ ಮನವಿ

ಶಿವಮೊಗ್ಗ, ನ. 19: ತುಂಗಾ ಏತ ನೀರಾವರಿ ಯೋಜನೆಯನ್ನು ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಹಾರ್ನಳ್ಳಿ ಹೋಬಳಿ ಭಾಗಕ್ಕೂ ವಿಸ್ತರಣೆ ಮಾಡಬೇಕು. ಈ ಭಾಗದ ಕೆರೆಗಳಿಗೆ ತುಂಗಾ ನದಿ ನೀರು ಹರಿಸಬೇಕು ಎಂದು ಆಗ್ರಹಿಸಿ ಕೆರೆ ನೀರು ತುಂಬಿಸುವ ಹೋರಾಟ ಸಮಿತಿಯು, ನೀರಾವರಿ ಸಚಿವ ಎಂ.ಬಿ.ಪಾಟೀಲ್‍ರವರಿಗೆ ಮನವಿ ಪತ್ರ ಅರ್ಪಿಸಿದೆ.
ಶನಿವಾರ ದಾವಣಗೆರೆ ಜಿಲ್ಲೆ ಚೆನ್ನಗೆರೆಗೆ ಆಗಮಿಸಿದ್ದ ಸಚಿವರನ್ನು ಸಮಿತಿಯ ಮುಖಂಡರು ಭೇಟಿಯಾಗಿ ಈ ಮನವಿ ಪತ್ರ ಅರ್ಪಿಸಿದರು. ಈ ವೇಳೆ ಸಚಿವರು ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಜೊತೆಗೆ ಯೋಜನೆಯ ಬಗ್ಗೆ ಸಮಗ್ರ ಯೋಜನಾ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಧಾನಪರಿಷತ್ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ರವಿಕುಮಾರ್, ಸಮಿತಿಯ ಮುಖಂಡರಾದ ಕೆ.ಜೆ.ಸುರೇಶ್‍ಗೌಡ, ಪ್ರಭಾಕರ್ ಭಾರಂಗಿ, ಮಥುರಾ ಸೆಂಟ್ರಲ್ ಹೋಟೆಲ್ ರಾಜೇಂದ್ರ, ಗುಡದಯ್ಯ, ಮಲ್ಲೇಶಪ್ಪ, ಕುಮಾರ್, ವಿಜಯೇಂದ್ರಪ್ಪ ಸೇರಿದಂತೆ ಮೊದಲಾದವರಿದ್ದರು.
ಬೇಡಿಕೆಯೇನು?: ಪ್ರಸ್ತುತ ತುಂಗಾ ಏತ ನೀರಾವರಿ ಯೋಜನೆಯಡಿ ಶಿವಮೊಗ್ಗ ನಗರದ ತುಂಗಾ ನದಿಯಿಂದ ಆಯನೂರಿನ ಗೌಡನ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಈ ಯೋಜನೆ ಪೂರ್ಣಗೊಂಡಿದ್ದು, ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ.
ಆದರೆ ಕುಂಸಿ ಹಾಗೂ ಹಾರ್ನಳ್ಳಿ ಹೋಬಳಿಗಳ ವ್ಯಾಪ್ತಿಯಲ್ಲಿ ಸರಿಸುಮಾರು 50 ಕ್ಕೂ ಅಧಿಕ ಕೆರೆಗಳಿವೆ. ಆದರೆ ಸಮರ್ಪಕವಾಗಿ ಮಳೆಯಾಗದಿರುವುದರಿಂದ ನಾಲ್ಕೈದು ವರ್ಷಗಳಿಂದ ಕೆರೆಗಳು ಭರ್ತಿಯಾಗಿಲ್ಲ. ಇದರಿಂದ ಜನ-ಜಾನುವಾರುಗಳು ಸ್ಥಿತಿ ಹೇಳತೀರದಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ಇದರಿಂದ ರೈತರ ಸ್ಥಿತಿ ಶೋಚನೀಯವಾಗಿದೆ ಎಂದು ಸಮಿತಿ ಸಚಿವರ ಗಮನಕ್ಕೆ ತಂದಿದೆ.
ಈ ಹಿನ್ನೆಲೆಯಲ್ಲಿ ಆಯನೂರಿನಿಂದ ಕೇವಲ 4 ಕಿ.ಮೀ. ದೂರದಲ್ಲಿರುವ ಕುಂಸಿ ಗ್ರಾಮದ ಚಿಕ್ಕಮರಸ ಕೆರೆಗೆ ಆಯನೂರಿನ ಗೌಡನ ಕೆರೆಗೆ ಹರಿಯಲಿರುವ ತುಂಗಾ ನದಿ ನೀರನ್ನು ಹರಿಸಬೇಕು. ಈ ಕೆರೆಗೆ ನೀರು ಹರಿದರೆ ಸುತ್ತುಮುತ್ತಲಿನ 50 ಕೆರೆಗಳಿಗೆ ನೀರು ಸ್ವಾಭಾವಿಕವಾಗಿ ಹರಿಯಲಿದೆ. ಇದರಿಂದ ಈ ಭಾಗದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ ಎಂದು ಸಮಿತಿಯು ಸಚಿವರಿಗೆ ಮಾಹಿತಿ ನೀಡಿದೆ.
ಮುಖಂಡರ ಅಹವಾಲು ಆಲಿಸಿದ ನಂತರ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, 'ಈ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೆನೆ. ಈ ಕುರಿತಂತೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೆನೆ. ಕಾಲಮಿತಿಯಲ್ಲಿ ಯೋಜನೆಯ ಸಮಗ್ರ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದು, ಈ ವರದಿ ಕೈ ಸೇರಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ' ಭರವಸೆ ನೀಡಿದ್ದಾರೆ.
'ಸಿಎಂಗೂ ಮನವಿ ಅರ್ಪಣೆ' : ಮುಖಂಡ ಕೆ.ಜೆ.ಸುರೇಶ್‍ಗೌಡ
'ಚೆನ್ನಗೆರೆ ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಮನವಿ ಪತ್ರ ಅರ್ಪಿಸಿದ್ದೆವೆ. ತುಂಗಾ ಏತ ನೀರಾವರಿ ಯೋಜನೆ ವಿಸ್ತರಣೆಯಿಂದ ಕುಂಸಿ ಹಾಗೂ ಹಾರ್ನಳ್ಳಿ ಭಾಗದ ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಜನ-ಜಾನುವಾರು, ಕೃಷಿಗೆ ಸಹಕಾರಿಯಾಗಲಿದೆ ಎಂಬುವುದನ್ನು ಅವರ ಗಮನಕ್ಕೆ ತಂದಿದ್ದೆವೆ. ಈ ಬಗ್ಗೆ ಜಲ ಸಂಪನ್ಮೂಲ ಸಚಿವರ ಜೊತೆ ಚರ್ಚೆ ನಡೆಸಿ, ಯೋಜನೆಯ ಅನುಷ್ಠಾನದ ಬಗ್ಗೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ' ಎಂದು ಕೆರೆ ನೀರು ತುಂಬಿಸುವ ಹೋರಾಟ ಸಮಿತಿಯ ಮುಖಂಡ ಕೆ.ಜೆ.ಸುರೇಶ್‍ಗೌಡರವರು ಮಾಹಿತಿ ನೀಡಿದ್ದಾರೆ.







