ಬಹುಮಾಧ್ಯಮ ಬಳಸಿಕೊಳ್ಳುವಾಗ ಎಚ್ಚರಿಕೆ ಬೇಕು:ಲೋಲಾಕ್ಷಿ
ವಿಭಾಗೀಯ ಮಟ್ಟದ ಸಂವಾದ ಕಾರ್ಯಕ್ರಮ

ಮದ್ದೂರ, ಅ.19: ಬಹುಮಾಧ್ಯಮಗಳು ಶಿಕ್ಷಣಕ್ಕೆ ಪೂರಕವಾಗಿವೆ. ಮಾಧ್ಯಮಗಳನ್ನು ನಾವು ಬಳಸಿಕೊಳ್ಳುವ ರೀತಿಯಲ್ಲಿ ಅದು ಅಡಗಿದೆ. ಮಾಧ್ಯಮಗಳಲ್ಲಿ ಕೆಟ್ಟದ್ದು ಒಳ್ಳೆಯದ್ದು ಇದೆ. ಆದರೆ, ಅದನ್ನು ಬಳಸಿಕೊಳ್ಳುವಾಗ ಎಚ್ಚರಿಕೆ ಇರಬೇಕು ಎಂದು ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಲೋಲಾಕ್ಷಿ ಅಭಿಪ್ರಾಯಪಟ್ಟರು.
ತಾಲೂಕಿನ ಕೆ.ಹೊನ್ನಲಗೆರೆ ಆರ್.ಕೆ.ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ಶಿಕ್ಷಣಕ್ಕೆ ಬಹುಮಾಧ್ಯಮಗಳು ಪೂರಕವೋ ಮಾರಕವೋ ವಿಚಾರವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳ ಜತೆ ಆಯೋಜಿಸಿದ್ದ ವಿಭಾಗೀಯ ಮಟ್ಟದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್.ಕೆ.ವಿದ್ಯಾಸಂಸ್ಥೆ ಕಾರ್ಯಾಧ್ಯಕ್ಷ ಪ್ರಸನ್ನ ಎನ್.ಗೌಡ ಮಾತನಾಡಿ, ಯಾವುದೆ ಮಾಧ್ಯಗಳನ್ನು ನಮಗೆ ಅಗತ್ಯ ತಕ್ಕಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು ವಿನಃ ಹೆಚ್ಚು ಬಳಕೆ ಮಾಡಿಕೊಳ್ಳಬಾರದು, ಅದರಲ್ಲೂ ವಿದ್ಯಾರ್ಥಿಗಳು ಈ ಬಗ್ಗೆ ಜಾಗರೂಕರಾಗಿರಬೇಕು ಎಂದರು.
ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಬಹುಮಾಧ್ಯಮಗಳನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಂಡರೆ ಒಳ್ಳೆಯದಾಗುತ್ತದೆ, ಕೆಟ್ಟದಕ್ಕೆ ಬಳಕೆ ಮಾಡಿದರೆ ಕೆಟ್ಟದಾಗುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಉದ್ದೇಶಕ್ಕೆ ಒಳಕೆ ಮಾಡಿಕೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
6 ಜಿಲ್ಲೆಗಳಿಂದ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ವಿಜೇತರಾದ 24 ವಿದ್ಯಾರ್ಥಿಗಳು ತಜ್ಞರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಾಲಕರ ವಿಭಾಗದಲ್ಲಿ ಹಾಡ್ಲಿಯ ಸರಕಾರಿ ಪ್ರೌಢಶಾಲೆಯ ಮಧು ಎಸ್. ಪ್ರಥಮ, ಮಂಡ್ಯದ ಡಾಪೋಡಿಲ್ಸ್ ಪ್ರೌಢಶಾಲೆಯ ಫಣಿ ಕೇದಾರ್ ದ್ವಿತೀಯ, ಕೆ.ಹೊನ್ನಲಗೆರೆ ಆರ್.ಕೆ.ಪ್ರೌಢಶಾಲೆಯ ಚಂದ್ರಶೇಖರ್ ತೃತೀಯ, ತೊಪ್ಪನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿತಿನ್‍ಗೌಡ ಸಮಾಧಾನಕರ ಬಹುಮಾನ ಪಡೆದರು.
ಬಾಲಕಿಯರ ವಿಭಾಗದಲ್ಲಿ ದುರ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಿ.ವಿ.ಚಂದನಾ ಪ್ರಥಮ, ಕೆ.ಹೊನ್ನಲಗೆರೆ ಆರ್.ಕೆ.ಪ್ರೌಢಶಾಲೆಯ ಎನ್.ಎಸ್. ಪೂರ್ವಿಕ್‍ಗೌಡ ದ್ವಿತೀಯ, ಚಂದೂಪುರ ಡಿ.ಕೆ.ಪ್ರೌಢಶಾಲೆಯ ಎಸ್.ಎಸ್.ಹರ್ಷಿತಾ ತೃತೀಯ, ಕೆ.ಎಂ.ದೊಡ್ಡಿಯ ಚಾಂಷುಗರ್ ಪ್ರೌಢಶಾಲೆಯ ಸ್ನೇಹ ಹರಿದಾಸ್ ಮಾಧಾನಕರ ಬಹುಮಾನಗಳಿಸಿದರು.
ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ ಅಧ್ಯಕ್ಷ, ಶಿಕ್ಷಣ ಸಂಯೋಜನಾಧಿಕಾರಿ ಮಹದೇವೇಗೌಡ, ಆಡಳಿತಾಧಿಕಾರಿ ಸತೀಶಬಾಬು, ಪ್ರಾಂಶುಪಾಲ ಸಿದ್ದೇಗೌಡ, ಮುಖ್ಯಶಿಕ್ಷಕರಾದ ಕಲ್ಯಾಣಿ, ರಮೇಶ್, ಇತರರು ಉಪಸ್ಥಿತರಿದ್ದರು.







