ಭಿನ್ನ ಜೀವಗಳನ್ನು ಪ್ರೀತಿಸಿ: ಓ.ಎಲ್.ನಾಗಭೂಷಣ ಸ್ವಾಮಿ
ಬೆಂಗಳೂರು, ನ.19: ದೈಹಿಕ ನ್ಯೂನತೆ ಮತ್ತು ಮಾನಸಿಕ ತಾಪತ್ರಯ ಹೊಂದಿರುವ ಮಕ್ಕಳನ್ನು ಸಮಾಜ ಪ್ರೀತಿಸಬೇಕು ಎಂದು ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ ಹೇಳಿದ್ದಾರೆ.
ಅಭಿರುಚಿ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಮೃತಾ ರಕ್ಷಿದಿ ರಚಿಸಿರುವ ‘ಅಮೃತಯಾನ ಕೃತಿಯ 5 ಸಂಪುಟ’ಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸ್ಕಿಜೋಫ್ರೇನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಅಮೃತಾ ಇಂದು ನಮ್ಮಿಂದಿಗೆ ಇಲ್ಲ. ಆದರೆ ಅವಳು ರಚಿಸಿರುವ ಕೃತಿಗಳು ಅಂಗವಿಕಲರು ಹಾಗೂ ಮಾನಸಿಕವಾಗಿ ಬಳಲುತ್ತಿರುವ ವ್ಯಕ್ತಿಗಳನ್ನು ಸಮಾಜ ನೋಡುತ್ತಿರುವ ಸಂವೇದನಾರಹಿತ ಪರಿಯನ್ನು ಬಿಂಬಿಸುತ್ತವೆ. ಮಗುವಿನ ಕಣ್ಣುಗಳಲ್ಲಿ ಲೋಕವನ್ನು ನೋಡುವಂತೆ ಇಲ್ಲಿ ನಿರೂಪಿಸಿದ್ದಾಳೆ ಎಂದರು.
ಇದರಲ್ಲಿನ ಅಧ್ಯಾಯಗಳಲ್ಲಿ ಅಮ್ಮನ ಕಾರುಣ್ಯ, ಅಪ್ಪನ ಕೋಪ, ಅಣ್ಣನ ಪ್ರೀತಿ ಹಾಗೂ ಸ್ನೇಹ ಬಳಗದ ಸಲುಗೆಗಳ ಮನಮುಟ್ಟುವ ಕಥನಗಳಿವೆ. ಬದುಕನ್ನು ತನ್ನದಲ್ಲವೆಂಬಂತೆ ಇಲ್ಲಿ ಚಿತ್ರಿಸಲಾಗಿದೆ. ನಮ್ಮನ್ನು ನಾವು ತಿದ್ದಿಕೊಳ್ಳಲು ಅಮೃತಯಾನ ನೆರವಾಗುತ್ತದೆ ಎಂದು ಹೇಳಿದರು.
ಲೇಖಕಿ ಡಾ.ವಿಜಯಾ ಮಾತನಾಡಿ, ಸಾಮಾಜಿಕ ವ್ಯವಸ್ಥೆ ತನಗೆ ಬೇಕಾದಂತೆ ವ್ಯಕ್ತಿಗಳು ಇರಬೇಕೆಂದು ಅಪೇಕ್ಷಿಸುತ್ತದೆ. ಇಂದು ಸ್ಪರ್ಧೆಗಳು ಸೋತವರನ್ನು ಕುಗ್ಗಿಸುತ್ತಿವೆ. ಇದರಿಂದ ಮಕ್ಕಳ ಪ್ರತಿಭೆಗಳು ಹೊರಬರುತ್ತಿಲ್ಲ ಎಂದರು.
ಚೆಲುವು, ದೇವರು, ತತ್ವಜ್ಞಾನ ಸೇರಿದಂತೆ ಹಲವಾರು ವಿಷಯಗಳು ಈ ಹೊತ್ತಗೆಯಲ್ಲಿವೆ. ನಾವೆಲ್ಲ ಸರಿ ಎಂದುಕೊಂಡಿರುವ ಸಮಾಜದಲ್ಲಿನ ಅಂಕುಡೊಂಕುಗಳೇನು, ಅವುಗಳನ್ನು ಹೇಗೆ ತಿದ್ದಬೇಕು ಎಂಬ ಸಲಹೆಗಳು, ವಿಶೇಷ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂಬ ಗಟ್ಟಿಧ್ವನಿ ಪುಸ್ತಕದಲ್ಲಿದೆ ಎಂದು ತಿಳಿಸಿದರು.
ಚಿತ್ರ ಕಲಾವಿದ ಡಾ.ಎಂ.ಎಸ್.ಮೂರ್ತಿ, ಪೋಷಕರು ತಮ್ಮದೆ ಆಲೋಚನಾ ಕ್ರಮದಿಂದ ಮಕ್ಕಳನ್ನು ಬೆಳೆಸುತ್ತಾರೆ. ಮಕ್ಕಳ ದೃಷ್ಟಿಕೋನದಲ್ಲಿ ಯೋಚಿಸುವುದಿಲ್ಲ. 18 ತಿಂಗಳ ನಂತರ ಮಕ್ಕಳು ತೋಚಿದನ್ನು ಚಿತ್ರರೂಪದಲ್ಲಿ ಗೀಚುತ್ತಾರೆ. ಅದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಗಮನಿಸಬೇಕು. ಅದರಿಂದ ಅವರ ಮಾನಸಿಕ ಸ್ಥಿತಿ ತಿಳಿಯುತ್ತದೆ ಎಂದು ನುಡಿದರು.
ಮಕ್ಕಳನ್ನು ಉತ್ತಮ ಸ್ಪರ್ಧಿಗಳಾಗಿ ರೂಪಿಸುತ್ತಿದ್ದೇವೆಯೇ ಹೊರತು, ಸೃಜನಶೀಲರಾಗುವಂತೆ ಬೆಳೆಸುತ್ತಿಲ್ಲ. ಇದರಿಂದ ಅವರ ಮನಸ್ಸಿನ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದರು.
ವೈದ್ಯರಾದ ಎಂ.ಕಿಶನ್, ಕೃಷ್ಣಮೂರ್ತಿ ಪಾರೆ, ಲೇಖಕ ಕೆ.ಪಿ.ಸುರೇಶ್ ಹಾಗೂ ರಂಗಕರ್ಮಿ ಪ್ರಸಾದ್ ರಕ್ಷಿದಿ ಕಾರ್ಯಕ್ರಮದಲ್ಲಿದ್ದರು.







