ಕವಿತೆಗೆಳು ಧ್ವನಿಸುರಳಿಗೆ ಬರುವಾಗ ಎಚ್ಚರಿಕೆ ಅಗತ್ಯ: ಸಿದ್ಧಲಿಂಗಯ್ಯ
ಬೆಂಗಳೂರು, ನ.29: ಕವಿತೆಯಲ್ಲಿರುವ ಆಶಯಗಳನ್ನು ಗಾಯಕ ಅರ್ಥ ಮಾಡಿಕೊಳ್ಳದೆ ಹಾಡಿದರೆ ಕವಿ ಹಾಗೂ ಕವಿತೆಯನ್ನು ವಂಚಿಸಿದಂತಾಗುತ್ತದೆ. ಹೀಗಾಗಿ ಕವಿತೆಗಳು ಧ್ವನಿಸುರಳಿಗೆ ಬರುವ ಮುನ್ನ ಎಚ್ಚರಿಕೆಯನ್ನು ವಹಿಸುವುದು ಅಗತ್ಯವಿದೆ ಎಂದು ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ತಿಳಿಸಿದ್ದಾರೆ.
ರವಿವಾರ ಸಂಗೀತ ಧಾಮ ನಗರದ ಮಲ್ಲೇಶ್ವರಂನಲ್ಲಿರುವ ಸುಕ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ರವರ ‘ಕರೆ ಬಳಗ’ ಧ್ವನಿಸುರಳಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡ ಕವಿತೆಗಳ ಧ್ವನಿ ಸುರಳಿ ಪದ್ಧತಿಯನ್ನು ಹಿರಿಯ ಕವಿ ರಾಮಚಂದ್ರ ಶರ್ಮ ವಿರೋಧ ವ್ಯಕ್ತಪಡಿಸುತ್ತಿದ್ದರು. ಧ್ವನಿಸುರಳಿಯಲ್ಲಿ ಉತ್ತಮ ಕವಿತೆಯನ್ನು ಕೆಟ್ಟ ಗಾಯಕ ಹಾಡಿದರೆ ಅದರ ನಿಜಸ್ವರೂಪ ಹಾಳಾಗುವ ಸಾಧ್ಯತೆ ಇದೆ. ಸಾಧಾರಣ ಕವಿತೆಯನ್ನು ಉತ್ತಮ ಗಾಯಕ ಧ್ವನಿಸುರಳಿಯಲ್ಲಿ ಉತ್ತಮವಾಗಿಸಿ ಬಿಡುವ ಅಪಾಯವಿದೆ. ಆ ಬಗ್ಗೆ ಕವಿಗಳು ಎಚ್ಚರಿಕೆ ವಹಿಸಿಕೊಂಡೇ ಧ್ವನಿಸುರಳಿಗೆ ಅನುಮತಿ ನೀಡಬೇಕು ಎಂದು ಅವರು ತಿಳಿಸಿದರು.
ನಾಡಿನ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯರವರ ಕವಿತೆಗಳು ಸಾಮಾಜಿಕ ಕಳಕಳಿಯ ಸಂವೇದನೆಯನ್ನು ಒಳಗೊಂಡಿವೆ. ಸಮಾಜದಲ್ಲಿನ ಏರುಪೇರುಗಳನ್ನು ತಿದ್ದುವಲ್ಲಿ, ಸಮಾನತೆಯನ್ನು ಸೃಷ್ಟಿಸುವಲ್ಲಿ ಮತ್ತು ಬಂಡಾಯ ಮನೋಭಾವನೆಯನ್ನು ವ್ಯಕ್ತಪಡಿಸುವ ಅವರ ಕವಿತೆಗಳ ಆಶಯವು ಯುವ ತಲೆಮಾರಿಗೆ ಮಾದರಿಯಾದುದ್ದಾಗಿದೆ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಮಾತನಾಡಿ, ಕನ್ನಡ ಭಾಷೆ ಮತ್ತು ಕನ್ನಡದ ಅಭಿವೃದ್ಧಿ ಹಾಗೂ ಆರೋಗ್ಯಕರ ಸಮಾಜಕ್ಕೆ ಪ್ರೊ.ಸಿದ್ಧರಾಮಯ್ಯ ಅಪರಿಮಿತ ಕೊಡುಗೆ ನೀಡಿದ್ದಾರೆ. ಅವರ ಕವಿತೆಗಳಲ್ಲಿ ವೈಚಾರಿಕತೆ, ವ್ಯಕ್ತಿತ್ವದ ಪಾವಿತ್ರತೆ ಕಾಯ್ದುಕೊಂಡಿದ್ದಾರೆ. ಮಹತ್ವದ ವಚನಕಾರರ ಅಂತರಂಗಗಳನ್ನು ಜನತೆಗಾಗಿ ತೆರೆದಿಟ್ಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಿದ್ಧರಾಮಯ್ಯರವರ ಭಾವಗೀತೆಗಳನ್ನು ಗಾಯಕಿ ಅರ್ಚನಾ ಉಡುಪ ಹಾಡಿದರು. ವೇದಿಕೆಯಲ್ಲಿ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಳಸಿದ್ದಪ್ಪ, ಗಾಯಕ ಮುದ್ದುಕೃಷ್ಣ, ನಿರ್ದೇಶಕ ನಂಜುಂಡೇಗೌಡ, ಕವಿತೆಗಳ ಸಂಗೀತ ಸಂಯೋಜಕ ಮೃತ್ಯುಂಜಯ ಉಪಸ್ಥಿತರಿದ್ದರು.







