ನರುಲಿಗಳನ್ನು ನಿವಾರಿಸಲು ಇಲ್ಲಿವೆ ಸುಲಭದ ಉಪಾಯಗಳು
ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ. ಮುಖದ ಮೇಲಿದ್ದರಂತೂ ತುಂಬ ರೇಜಿಗೆ ಹುಟ್ಟಿಸುತ್ತವೆ. ಈ ನರುಲಿಗಳಿಂದ ಪಾರಾಗಲು ಸುಲಭದ ಪರಿಣಾಮಕಾರಿ ನೈಸರ್ಗಿಕ ವಿಧಾನಗಳಿಲ್ಲಿವೆ.
*ತುಳಸಿ
ತುಳಸಿಯು ನುರುಲಿಗಳನ್ನು ನಿರ್ಮೂಲಿಸಬಲ್ಲ ಬ್ಯಾಕ್ಟೀರಿಯಾ ನಿರೋಧಕಗಳ ಮೂಲವಾಗಿದೆ. ಕೆಲವು ತುಳಸಿ ಎಲೆಗಳನ್ನು ಗ್ರೈಂಡರ್ನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಈ ಪುಡಿಗೆ ಅಗತ್ಯ ಪ್ರಮಾಣದಲ್ಲಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ನ್ನು ನರೂಲಿಯ ಮೇಲೆ ಸಂಪೂರ್ಣವಾಗಿ ಲೇಪಿಸಿ 10 ನಿಮಿಷಗಳ ಕಾಲ ಬಿಡಿ. ಇದನ್ನು ಪ್ರತಿದಿನವೂ ಪುನರಾವರ್ತಿಸಿದರೆ ನರೂಲಿಗಳಿಂದ ಶೀಘ್ರ ಬಿಡುಗಡೆ ಸಾಧ್ಯ.
*ಬೇಕಿಂಗ್ ಪೌಡರ್
ನರುಲಿಗಳನ್ನು ತೆಗೆಯಲು ಬಹಳ ಹಿಂದಿನಿಂದಲೂ ಬಳಕೆಯಾಗುತ್ತಿರುವ ಮನೆಮದ್ದು ಎಂದರೆ ಬೇಕಿಂಗ್ ಪೌಡರ್ ಆಗಿದೆ. ಪ್ರಬಲ ಬ್ಯಾಕ್ಟೀರಿಯಾ ಪ್ರತಿರೋಧಕ ಸಂಯುಕ್ತಗಳನ್ನು ಹೊಂದಿರುವ ಬೇಕಿಂಗ್ ಪೌಡರ್ ನರುಲಿಗಳನ್ನು ನಿರ್ಮೂಲಿಸುವ ಜೊತೆಗೆ ಅವು ಮತ್ತೆ ತಲೆಯೆತ್ತುವುದನ್ನು ತಡೆಯುತ್ತದೆ. ಒಂದು ಚಿಟಿಕೆಯಷ್ಟು ಬೇಕಿಂಗ್ ಪೌಡರ್ನ್ನು ಒಂದು ಚಮಚ ಡಿಸ್ಟಿಲ್ಡ್ ವಾಟರ್ನೊಂದಿಗೆ ಬೆರೆಸಿ, ಈ ಪೇಸ್ಟ್ನ್ನು ನರುಲಿಗೆ ಲೇಪಿಸಿ 10 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಟೀ ಟ್ರೀ ಆಯಿಲ್
ಟೀ ಟ್ರೀ ಆಯಿಲ್ ನರುಲಿಗಳ ನಿವಾರಣೆಗೆ ಇನ್ನೊಂದು ಪರಿಣಾಮಕಾರಿ ನೈಸರ್ಗಿಕ ಉಪಾಯವಾಗಿದೆ. ನರುಲಿಗಳಿಗೆ ಕಾರಣವಾಗುವ ವೈರಸ್ಗಳೊಂದಿಗೆ ಹೋರಾಡುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಈ ಎಣ್ಣೆಯಲ್ಲಿ ಸಮೃದ್ಧವಾಗಿವೆ. 2-3 ಹನಿ ಟೀ ಟ್ರೀ ಆಯಿಲ್ನ್ನು ಅರ್ಧ ಚಮಚ ತೆಂಗಿನೆಣ್ಣೆಯೊಂದಿಗೆ ಬೆರೆಸಿ ಪೀಡಿತ ಭಾಗಕ್ಕೆ ಸವರಿ ಕೆಲವು ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಕಿತ್ತಳೆ ಹಣ್ಣಿನ ಸಿಪ್ಪೆ
ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಹೇರಳ ಪ್ರಮಾಣದಲ್ಲಿರುವ ವಿಟಾಮಿನ್ ಸಿ ನರುಲಿಗಳನ್ನು ನಿವಾರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಅರ್ಧ ಚಮಚ ಪುಡಿಯನ್ನು ಒಂದು ಚಮಚ ರೋಸ್ ವಾಟರ್ ಅಥವಾ ಪನ್ನೀರಿನೊಂದಿಗೆ ಬೆರೆಸಿ ಅದನ್ನು ನರುಲಿಗೆ ಲೇಪಿಸಿ, ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ.
*ಅಲೋವೆರಾ ಜೆಲ್
ಅಲೋವೆರಾ ಕೂಡ ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿದ್ದು, ನರುಲಿಗಳನ್ನು ನಿರ್ಮೂಲಿಸುವ ಜೊತೆಗೆ ಅವು ಮತ್ತೆ ತಲೆಯೆತ್ತುವುದನ್ನು ತಡೆಯುತ್ತದೆ. ತಾಜಾ ಅಲೋವೆರಾ ಜೆಲ್ ಅನ್ನು ಪೀಡಿತ ಭಾಗಗಳ ಮೇಲೆ ಲೇಪಿಸಿ ಒಂದು ಗಂಟೆ ಕಾಲ ಹಾಗೆಯೇ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಆ್ಯಪಲ್ ಸಿಡರ್ ವಿನೆಗರ್
ಆ್ಯಪಲ್ ಸಿಡರ್ ವಿನೆಗರ್ನಲ್ಲಿರುವ ಆಮ್ಲೀಯ ಗುಣಗಳಿಂದಾಗಿ ಅದು ನರುಲಿಗಳನ್ನು ನಿರ್ಮೂಲಿಸುವಲ್ಲಿ ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿದೆ. ಆ್ಯಪಲ್ ಸಿಡರ್ ವಿನೆಗರ್ನ್ನು ನೀರಿನೊಂದಿಗೆ ಬೆರೆಸಿ ಪೀಡಿತ ಭಾಗಗಳಿಗೆ ಹಚ್ಚಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಪುನರಾವರ್ತಿಸಿ.
*ಬಾಳೇಹಣ್ಣಿನ ಸಿಪ್ಪೆ
ಬಾಳೇಹಣ್ಣಿನ ಸಿಪ್ಪೆಯಲ್ಲಿರುವ ಕೆಲವು ಪೌಷ್ಟಿಕಾಂಶಗಳು ನರುಲಿಗಳನ್ನು ನಿವಾರಿಸಲು ಸಹಾಯಕವಾಗಿವೆ. ನರುಲಿ ಎದ್ದಿರುವ ಭಾಗದ ಮೇಲೆ ಬಾಳೇಹಣ್ಣಿನ ಸಿಪ್ಪೆಯಿಂದ ಮೃದುವಾಗಿ ಉಜ್ಜಿರಿ. ದಿನಕ್ಕೊಂದು ಬಾರಿ ಇದನ್ನು 5-10 ನಿಮಿಷಗಳ ಕಾಲ ಮಾಡಿ ಬಳಕ ತಣ್ಣೀರಿನಿಂದ ತೊಳೆದುಕೊಳ್ಳಿ.
*ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ನರುಲಿಯನ್ನು ನಿವಾರಿಸುವ ಜೊತೆಗೆ ಅವು ಮರುಕಳಿಸದಂತೆ ನೋಡಿಕೊಳ್ಳುತ್ತವೆ. ಬೆಳ್ಳುಳ್ಳಿಯ ಒಂದು ಎಸಳನ್ನು ಕೈಯಲ್ಲಿ ಜಜ್ಜಿ ಅದನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಅದನ್ನು ನರುಲಿಗೆ ಸವರಿ ಹತ್ತು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೊಂದು ಬಾರಿ ಹೀಗೆ ಮಾಡಿದರೆ ನರುಲಿಗಳು ಮಾಯವಾಗುತ್ತವೆ.