ದರೋಡೆ ಪ್ರಕರಣ: ಸಂಘಟನೆಯೊಂದರ ಅಧ್ಯಕ್ಷ ಬಂಧನ
ಬೆಂಗಳೂರು, ನ.20: ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಯೊಂದರ ವಾರ್ಡ್ ವಿಭಾಗದ ಅಧ್ಯಕ್ಷನನ್ನು ಬಂಧಿಸುವಲ್ಲಿ ಹಲಸೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಜೋಗುಪಾಳ್ಯದ ನಿವಾಸಿ, ಸಂಘಟನೆಯೊಂದರ ವಾರ್ಡ್ ವಿಭಾಗದ ಅಧ್ಯಕ್ಷ ವರುಣ್ ಯಾನೆ ಚಿನ್ನು ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ರವಿವಾರ ಮಧ್ಯರಾತ್ರಿ ಜೋಗುಪಾಳ್ಯದ ನಿವಾಸಿ ವಾಲ್‌ಸನ್ ಸತಾವೋ ಎಂಬವರು ನಡೆದು ಮನೆಗೆ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು, ಇವರನ್ನು ಅಡ್ಡಗಟ್ಟಿ ಬೆದರಿಸಿ ಅವರ ಬಳಿಯಿದ್ದ 790 ರೂ. ಕಸಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು ವಾಲ್‌ಸನ್ ಸತಾವೋನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಎಟಿಎಂನಿಂದ 3500 ರೂ. ತೆಗೆಸಿಕೊಂಡು, ವಾಚನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತಕ್ಷಣ ವಾಲ್‌ಸನ್ ಅವರು ಪೊಲೀಸ್ ಸಹಾಯವಾಣಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರ ಪೈಕಿ ಒಬ್ಬನನ್ನು ವಶಕ್ಕೆ ಪಡೆದು ನಗದು ವಾಪಸ್ಸು ಪಡೆದುಕೊಂಡಿದ್ದಾರೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಹಲಸೂರು ಠಾಣಾ ಪೊಲೀಸರು ಮತ್ತೊಬ್ಬ ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ.







