ಜ.1ರೊಳಗೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಘಟಕ: ಸಚಿವ ರಮೇಶ್‍ಕುಮಾರ್
.jpg)
ಬೆಳಗಾವಿ, ನ.20: ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಜನವರಿ 1ರೊಳಗೆ ತೀವ್ರ ನಿಗಾ ಘಟಕಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.
ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬೋಸರಾಜು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಸರಕಾರದ ಮುಂದಿಲ್ಲ. ಈಗಾಗಲೇ 200ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞರ ಕೊರತೆಯಿದೆ ಎಂದು ತಿಳಿಸಿದರು.
ಕೆಪಿಎಸ್ಸಿ, ಗುತ್ತಿಗೆ, ಬಿಡ್, ಕಾಲ್ ಬೇಸಿಸ್ ಹೀಗೆ ಏನೇ ಸರ್ಕಸ್ ಮಾಡಿದರೂ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಿಲ್ಲ. ಜನರ ಖುಷಿಗೆ ನಾವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವುದಾಗಿ ಹೇಳುವುದಿಲ್ಲ. 150ಕ್ಕಿಂತ ಹೆಚ್ಚು ಹೊರ ರೋಗಿಗಳಿರುವ ಆಸ್ಪತ್ರೆಗಳಿಗೆ ಇನ್ನೊಬ್ಬ ವೈದ್ಯರನ್ನು ಕೊಡಲಾಗುವುದು ಎಂದವರು, ರೋಗಿಗಳಿಗೆ ತುರ್ತು ಚಿಕಿತ್ಸೆ ಒದಗಿಸುವ ಹಿನ್ನೆಲೆಯಲ್ಲಿ ಸರಕಾರ ಈಗಾಗಲೇ 10-12 ಕಿ.ಮೀ.ಗೆ ಒಂದರಂತೆ ಆ್ಯಂಬುಲೆನ್ಸ್ ಸೇವೆ ಒದಗಿಸಿದೆ ಎಂದು ತಿಳಿಸಿದರು.







