ಮೋದಿ ಸರಕಾರ ವಿಶ್ವದ 3ನೇ ಅತ್ಯಂತ ವಿಶ್ವಾಸಾರ್ಹ ಸರಕಾರ: ವಿಶ್ವ ಆರ್ಥಿಕ ವೇದಿಕೆ ಸಮೀಕ್ಷೆ

ಹೊಸದಿಲ್ಲಿ, ನ.20: ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ಸರಕಾರವೊಂದನ್ನು ಮುನ್ನಡೆಸುತ್ತಿದ್ದು , ಸುಮಾರು ಮುಕ್ಕಾಲುಪಾಲು ಭಾರತೀಯರು ತಮಗೆ ಕೇಂದ್ರ ಸರಕಾರದ ಮೇಲೆ ವಿಶ್ವಾಸವಿರುವುದಾಗಿ ತಿಳಿಸಿದ್ದಾರೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್) ತಿಳಿಸಿದೆ.
ಮೋದಿ ನೇತೃತ್ವದ ಬಿಜೆಪಿ ಸರಕಾರ ವಿಶ್ವದ 3ನೇ ಅತ್ಯಂತ ವಿಶ್ವಾಸಾರ್ಹ ಸರಕಾರವಾಗಿದೆ ಎಂದು ವಿಶ್ವಮಟ್ಟದಲ್ಲಿ ನಡೆಸಿರುವ ಹೊಸ ಸಮೀಕ್ಷೆಯಲ್ಲಿ ತಿಳಿದು ಬಂದಿರುವುದಾಗಿ ಡಬ್ಲೂಇಎಫ್‌ನ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘ(ಒಸಿಇಡಿ) ತಿಳಿಸಿದೆ.
ಸುಮಾರು ಶೇ.74ರಷ್ಟು ಭಾರತೀಯರು ಮೋದಿ ಸರಕಾರದ ಬಗ್ಗೆ ವಿಶ್ವಾಸ ಸೂಚಿಸಿದ್ದಾರೆ. ಕೇಂದ್ರ ಸರಕಾರ ಭ್ರಷ್ಟಾಚಾರ ನಿಗ್ರಹಿಸಲು ಹಾಗೂ ತೆರಿಗೆ ಸುಧಾರಣೆಯ ನಿಟ್ಟಿನಲ್ಲಿ ಕೈಗೊಂಡಿರುವ ಕಠಿಣ ಕ್ರಮಗಳು ಈ ವಿಶ್ವಾಸಕ್ಕೆ ಕಾರಣವಾಗಿರಬಹುದು ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಪಟ್ಟಿಯಲ್ಲಿ ಸ್ವಿಝರ್ಲಾಂಡ್ ಪ್ರಥಮ, ಇಂಡೋನೇಶಿಯಾ ದ್ವಿತೀಯ ಸ್ಥಾನದಲ್ಲಿದೆ. ಜನತೆಯ ವಿಶ್ವಾಸಾರ್ಹತೆಯನ್ನು ಗಣನೀಯ ಸ್ಥಾನದಲ್ಲಿ ಕಳೆದುಕೊಂಡ ರಾಷ್ಟ್ರಗಳೆಂದರೆ ಚೀನಾ, ಫಿನ್‌ಲ್ಯಾಂಡ್, ಗ್ರೀಸ್ ಹಾಗೂ ಸ್ಲೊವೇನಿಯಾ ದೇಶಗಳು. ಅರ್ಥವ್ಯವಸ್ಥೆಯ ಸ್ಥಿತಿ, ರಾಜಕೀಯ ಸುಧಾರಣೆ, ಪ್ರಮುಖ ಭ್ರಷ್ಟಾಚಾರ ಪ್ರಕರಣ ನಡೆಯದಿರುವುದು- ಈ ಮೂರನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ.
ಕಳೆದ ಜುಲೈಯಲ್ಲಿ ಪ್ರಕಟಿಸಲಾಗಿದ್ದ ಮತ್ತೊಂದು ಒಇಸಿಡಿ ವರದಿಯಲ್ಲೂ ಮೋದಿ ಸರಕಾರ ವಿಶ್ವದ ಅತ್ಯಂತ ವಿಶ್ವಾಸಾರ್ಹ ಸರಕಾರಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಆ ಸಂದರ್ಭ ಮೋದಿ ಸರಕಾರವನ್ನು ದೇಶದ ಶೇ.73ರಷ್ಟು ಜನತೆ ಬೆಂಬಲಿಸಿದ್ದರು.
ಈ ಸಮೀಕ್ಷೆಯ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಪ್ರಕಾಶ್ ನಡ್ಡ, ಕಳೆದ ಕೆಲ ವರ್ಷಗಳಲ್ಲಿ ಪ್ರಜೆಗಳು ಸರಕಾರ ಮತ್ತು ರಾಜಕಾರಣಿಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದರು. ಆದರೆ ನರೇಂದ್ರ ಮೋದಿಯವರ ಕಾರ್ಯನೀತಿ ಹಾಗೂ ನಾಯಕತ್ವ ಜನರಲ್ಲಿ ಮತ್ತೆ ವಿಶ್ವಾಸಾರ್ಹತೆ ಮೂಡಿಸಿದೆ. ಮೋದಿ ನಾಯಕತ್ವದಲ್ಲಿ ನವಭಾರತವನ್ನು ಪ್ರತಿಯೊಬ್ಬ ಭಾರತೀಯನೂ ಕಾಣುತ್ತಿದ್ದಾನೆ ಎಂದು ಹೇಳಿದ್ದಾರೆ.







