ಸಿನಿಮೀಯ ರೀತಿಯಲ್ಲಿ ಬಾಲಕಿ ಅಪಹರಣಕ್ಕೆ ಯತ್ನ: ಆರೋಪಿಯ ಬಂಧನ

ಬಣಕಲ್, ನ.20: ಬಾಳೆಹೊನ್ನೂರಿನ ತನ್ನ ಅಜ್ಜಿ ಮನೆಯಿಂದ ಬಾಲಕಿಯೋರ್ವಳು ಮೂಡಿಗೆರೆ ಸಮೀಪದ ಘಟ್ಟದಹಳ್ಳಿಯ ತನ್ನ ಮನೆಗೆ ತಂದೆ ಜತೆ ಹೊರಟಿದ್ದಾಗ ಕೊಟ್ಟಿಗೆಹಾರದಲ್ಲಿ ಸಿನಿಮೀಯ ರೀತಿಯಲ್ಲಿ ಯುವಕನೋರ್ವ ಆಕೆಯನ್ನು ಅಪಹರಣಕ್ಕೆ ಯತ್ನಿಸಿ ವಿಫಲವಾದ ಘಟನೆ ಬಣಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಘಟನೆಯ ವಿವರ: ಬಾಲಕಿ ತನ್ನ ತಂದೆಯೊಂದಿಗೆ ಬಾಳೆಹೊನ್ನೂರಿನ ಅಜ್ಜಿ ಮನೆಯಿಂದ ಮೂಡಿಗೆರೆ ಸಾಗಲು ಖಾಸಗಿ ಬಸ್‍ನಲ್ಲಿ ಕೊಟ್ಟಿಗೆಹಾರಕ್ಕೆ ಬಂದು ಇಳಿದು ಟೀ ಕುಡಿಯಲು ಹೊಟೇಲ್‍ಗೆ ತೆರಳಿದ್ದಾರೆ. ಆಗ ಮೂಡಿಗೆರೆ ಸಮೀಪದ ಕಡಿದಾಳು ಯುವಕ ಸಂತೋಷ್ ಎಂಬಾತ ಕೊಟ್ಟಿಗೆಹಾರಕ್ಕೆ ಬಂದು ಆಕೆಯನ್ನು ತನ್ನ ಓಮಿನಿಯಲ್ಲಿ ಕುಳ್ಳಿರಿಸಿ ಮೂಡಿಗೆರೆ ಕಡೆಗೆ ಕಾರನ್ನು ಚಲಾಯಿಸಿದ್ದಾನೆ. ತಕ್ಷಣ ಮಾಹಿತಿ ತಿಳಿದ ಸ್ಥಳೀಯರು ಬಣಕಲ್ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯ ಪ್ರವೃತ್ತರಾದ ಪಿಎಸ್ಸೈ ಸಕ್ತಿವೇಲು, ಎಎಸ್ಸೈ ಶಶಿ, ರುದ್ರೇಶ್, ಷಡಾಕ್ಷರಿ, ಯೋಗೀಶ್ ಬಣಕಲ್‍ನ ಚೇಗು ಒಳ ರಸ್ತೆಯಿಂದ ವಾಹನವನ್ನು ಬೆನ್ನಟ್ಟಿ ಹೆಸಗೋಡು ಸಮೀಪ ಕಾರನ್ನು ಅಡ್ಡಗಟ್ಟಿ ಕಾರನ್ನು ವಶಪಡಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ.
ಯುವಕ ಸಂತೋಷ್‍ನಿಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





