ದಲಿತರ ಒಗ್ಗಟ್ಟಿನ ಕೊರತೆಯಿಂದ ರಾಜಕೀಯ ಅಧಿಕಾರದಿಂದ ವಂಚಿತರಾಗುತ್ತಿದ್ದೇವೆ: ಜ್ಞಾನಪ್ರಕಾಶ್ ಸ್ವಾಮೀಜಿ

ಬಳ್ಳಾರಿ, ನ.20: ದಲಿತ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯವಾಗಿ ಅಧಿಕಾರದಿಂದ ವಂಚಿತರಾಗುತ್ತಿದ್ದೇವೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ವಿಷಾದಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾ ನಗರದ ಡಾ.ಜೋ.ದೊ. ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಪ್ರದಾನ ಹಾಗೂ ಕನ್ನಡನಾಡಿನ ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 1.8 ಕೋಟಿ, ದೇಶದಲ್ಲಿ 40 ಕೋಟಿ ದಲಿತ, ದಮನಿತ, ತಳ ಸಮುದಾಯಗಳ ಜನಸಂಖ್ಯೆ ಇದ್ದರೂ ಪ್ರಧಾನಿ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಏರುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ದಲಿತ ಸಮುದಾಯದ ಎಲ್ಲ ಜಾತಿಯ ಮುಖಂಡರು ಗಂಭೀರವಾಗಿ ಚಿಂತಿಸಬೇಕಾಗಿದೆ ಅವರು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ತತ್ವಾದರ್ಶಗಳನ್ನು ಪಾಲಿಸದಿರುವುದರಿಂದ ದಲಿತ ಸಮುದಾಯಕ್ಕೆ ಬೇಡುವ ದುಸ್ಥಿತಿ ಬಂದಿದೆ. ಇತಿಹಾಸದ ದಾಖಲೆಗಳ ಪ್ರಕಾರ ಆಳುವ ವರ್ಗವಾಗಿದ್ದ ಛಲವಾದಿ ಸಮುದಾಯ ಬೇಡುವಂತಹ ಹೀನ ಸ್ಥಿತಿಗೆ ಬರಲು ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯದಿರುವುದೇ ಪ್ರಮುಖ ಕಾರಣ ಎಂದು ಅವರು ವಿಷಾದಿಸಿದರು.
ರಾಜ್ಯ ಛಲವಾದಿ ಮಹಾಸಭಾದ ಸಂಸ್ಥಾಪಕ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಮಾತನಾಡಿ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಫೇಲಾಗಿದ್ದ ತಾವು ಐಎಎಸ್ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ರಾಜ್ಯದಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಪರಿಶ್ರಮ, ಶ್ರದ್ಧೆ, ಛಲವಿದ್ದರೆ ಎಂತಹ ಪರೀಕ್ಷೆಗಳಲ್ಲಿಯೂ ಯಶ ಕಾಣಬಹುದು. ಬಾಬಾ ಸಾಹೇಬರನ್ನು ಆದರ್ಶವಾಗಿಟ್ಟುಕೊಂಡರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಚಿತ್ರದುರ್ಗ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಛಲವಾದಿ ಸಮುದಾಯಕ್ಕೆ ಶ್ರೀಮಂತ ಸಂಸ್ಕೃತಿ, ಭವ್ಯ ಇತಿಹಾಸವಿದೆ. ನಾಡಿನ ಪ್ರಸಿದ್ಧ ಚಾಲುಕ್ಯ ಸಾಮ್ರಾಜ್ಯದ ಮೂಲಪುರುಷರು ಛಲವಾದಿಗಳಾಗಿದ್ದಾರೆ. ಈ ಸಮುದಾಯ ಸೇರಿದಂತೆ ಎಲ್ಲ ದಮನಿತ ಜಾತಿಗಳು ಮೂಢನಂಬಿಕೆ, ಅಂಧಶ್ರದ್ಧೆಯನ್ನು ಬಿಟ್ಟರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ನರಸಪ್ಪ ಮಾತನಾಡಿ, ಐಎಎಸ್, ಐಪಿಎಸ್ ಪರೀಕ್ಷೆ ಬರೆಯುವ ಜಿಲ್ಲೆಯ ಛಲವಾದಿ ಸಮಾಜದ ಯುವಕ-ಯುವತಿಯರಿಗೆ ಸಿಎಂಎಸ್ ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದರು.
ಈ ವೇಳೆ 2017ನೆ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಛಲವಾದಿ ಸಮುದಾಯದ ಜಿಲ್ಲೆಯ 50 ಜನ ಪ್ರತಿಭಾವಂತ ಮಕ್ಕಳನ್ನು ಹಾಗೂ ಸಮಾಜದ 50 ಜನ ಹಿರಿಯ ಮುಖಂಡರು, ವಿವಿಧ ರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ್, ಪ್ರಾಧ್ಯಾಪಕ ಡಾ.ರಾಜೇಂದ್ರ ಪ್ರಸಾದ್ ಮತ್ತಿತರರು ಮಾತನಾಡಿದರು.







