ಫರಂಗಿಪೇಟೆ: ಪಡಿತರ ಚೀಟಿದಾರರಿಂದ ನ್ಯಾಯಬೆಲೆ ಅಂಗಡಿಗೆ ಮುತ್ತಿಗೆ

ಬಂಟ್ವಾಳ, ನ. 20: ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧೀನದ ನ್ಯಾಯಬೆಲೆ ಅಂಗಡಿಗೆ ಸೋಮವಾರ ಪಡಿತರ ಚೀಟಿದಾರರು ಮುತ್ತಿಗೆ ಹಾಕಿ ಸೊಸೈಟಿಯ ವಿಳಂಬ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಟರ್ ನೆಟ್ ಸಮಸ್ಯೆ ಎಂಬ ನೆಪವೊಡ್ಡಿ ಪಡಿತರ ನೀಡಲು ಸೊಸೈಟಿ ಸಿಬ್ಬಂದಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ ಪಡಿತರ ಚೀಟಿದಾರರು ಅಲ್ಲಿನ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇಲ್ಲಿ ಪ್ರತಿ ತಿಂಗಳು ಪಡಿತರ ನೀಡುವಾಗ ಸತಾಯಿಸುತ್ತಿರುವುದಾಗಿ ಆರೋಪಿಸಿದ ಅವರು ಪುದು ಗ್ರಾಮ ಪಂ. ವ್ಯಾಪ್ತಿಯಲ್ಲಿ ಒಟ್ಟು ಮೂರು ನ್ಯಾಯಬೆಲೆ ಅಂಗಡಿಗಳಿದ್ದರೂ ಇಲ್ಲಿ ಮಾತ್ರ ಗ್ರಾಹಕರಿಗೆ ತೊಂದರೆ ನೀಡಲಾಗುತ್ತದೆ. ಸರಕಾರದ ಎಲ್ಲಾ ನಿಯಮಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ದೂರಿದರು.
ದಿನವಿಡೀ ಇಲ್ಲಿ ಸರತಿಯಲ್ಲಿ ನಿಂತರೂ ಪಡಿತರ ಸಿಗುವುದಿಲ್ಲ, ಮಹಿಳೆಯರು, ವೃದ್ಧರು ಇದರಿಂದಾಗಿ ತೊಂದರೆ ಪಡುತ್ತಿದ್ದಾರೆ. ಕಾರ್ಮಿಕರು ತಮ್ಮ ಕೆಲಸ ಬಿಟ್ಟು ಪಡಿತರ ಕ್ಕಾಗಿ ಇಲ್ಲಿ ಕಾಯಬೇಕಾಗಿದೆ ಎಂದು ಅಲವತ್ತುಕೊಂಡರು.
ಜಿ.ಪಂ.ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾ.ಪಂ ಉಪಾಧ್ಯಕ್ಷ ಹಾಸೀರ್ ಪೇರಿಮಾರ್, ಸದಸ್ಯ ರಮ್ಲಾನ್ ಅವರು ಸ್ಥಳಕ್ಕೆ ತರಳಿ ಸಮಸ್ಯೆಯ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರಿಗೆ ದೂರವಾಣಿ ಮೂಲಕ ದೂರಿಕೊಂಡರು. ಸಚಿವರ ಸೂಚನೆಯಂತೆ ಸ್ಥಳಕ್ಕೆ ಮಂಗಳೂರು ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಇಂಟರ್‌ನೆಟ್ ಇಲ್ಲದೆ ಪಡಿತರ ಚೀಟಿದಾರರಿಗೆ ನೀಡಲು ಸಾಧಗ್ಯವಾಗುವುದಿಲ್ಲ ಎಂದು ನೆಪ ಹೇಳಿ ವಾಪಸ್ ಕಳುಹಿಸಲಾಗುತ್ತದೆ ಇಂತಹ ಸಮಸ್ಯೆ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಉಪನಿರ್ದೇಶಕರನ್ನು ಒತ್ತಾಯಿಸಲಾಯಿತು.







