‘ಸಿದ್ಧರಾಮಯ್ಯರಿಗೆ ಮಠಕ್ಕೆ ಬರಲು ಆಸಕ್ತಿ ಇಲ್ಲ’
ಉಡುಪಿ, ನ.20: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೆ ನಾಲ್ಕು ಬಾರಿ ಉಡುಪಿ ಜಿಲ್ಲೆಗೆ ಬಂದಾಗಲೂ ಶ್ರೀಕೃಷ್ಣ ಮಠಕ್ಕೆ ಆಗಮಿಸಲು ಆಹ್ವಾನ ನೀಡಲಾಗಿತ್ತು. ಆದರೆ ಅವರು ಬರಲು ಆಸಕ್ತಿಯನ್ನು ತೋರಿಸದೇ ಇದ್ದುದರಿಂದ ಈ ಬಾರಿ ಆಹ್ವಾನ ನೀಡಿಲ್ಲ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಿನ್ನೆ ಉಡುಪಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮುಖ್ಯಮಂತ್ರಿಗಳು, ನನಗೆ ಮಠದಿಂದ ಆಹ್ವಾನ ಬಾರದಿರುವ ಕಾರಣ ಹೋಗುತ್ತಿಲ್ಲ ಎಂದು ಹೇಳಿದ ಕುರಿತು ಪೇಜಾವರ ಶ್ರೀಗಳನ್ನು ಇಂದು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು.
ಹಿಂದೆ ನಾಲ್ಕು ಬಾರಿ ಅವರನ್ನು ಆಹ್ವಾನಿಸಿದಾಗಲೂ ಬಂದಿರಲಿಲ್ಲ. ಬರಲು ಆಸಕ್ತಿಯನ್ನೂ ತೋರಿಸಿದ ಕಾರಣ ಈ ಬಾರಿ ನಾವು ಅವರನ್ನು ಮಠಕ್ಕೆ ಬರುವಂತೆ ಆಹ್ವಾನಿಸಿಲ್ಲ ಎಂದರು. ಅವರು ಬಾರದಿರುವುದಕ್ಕೆ ಕಾರಣವೇನೆಂಬುದು ನನಗೆ ಗೊತ್ತಿಲ್ಲ ಅದು ಅವರ ಇಷ್ಟ ಎಂದರು.
ಬುದ್ಧಿಜೀವಿಗಳ ಒತ್ತಡ: ಶ್ರೀಗಳೊಂದಿಗೆ ನನಗೆ ಯಾವುದೇ ಮನಸ್ತಾಪವಿಲ್ಲ ಎಂದು ಸಿದ್ದರಾಮಯ್ಯ ಹೇಳಿರುವ ಕುರಿತು ಗಮನ ಸೆಳೆದಾಗ, ಹಿಂದೆ ನಾವು ಅವರನ್ನು ಹಲವು ಬಾರಿ ಭೇಟಿಯಾಗಿ ಮಾತನಾಡಿದ್ದೇವೆ ಎಂದರು. ಹಾಗಿದ್ದರೆ ಸಿದ್ದರಾಮಯ್ಯ ಮಠಕ್ಕೆ ಬಾರದಿರಲು ಕಾರಣ ಏನೀರಬಹುದು ಎಂದು ಮತ್ತೆ ಕೇಳಿದಾಗ, ನಮ್ಮಲ್ಲಿ ಕೆಲವು ಬುದ್ಧಿಜೀವಿಗಳಿಗೆ ಶ್ರೀಕೃಷ್ಣ ಮಠ ಹಾಗೂ ಪೇಜಾವರಶ್ರೀಗಳೆಂದರೆ ಆಗಲ್ಲ. ಅವರು ಶ್ರೀಕೃಷ್ಣ ಮಠಕ್ಕೆ ಹೋಗದಂತೆ ಅವರ ಮೇಲೆ ಒತ್ತಡ ಹೇರುತಿದ್ದಾರೆ ಎಂದು ಹೇಳಿದರು.







