ಭಾರತದಲ್ಲಿ ಪತ್ತೆಯಾಯ್ತು ಡೈನೋಸಾರ್ ನಂತೆ ಕಾಣುವ ಜೀವಿಯ ಪಳೆಯುಳಿಕೆ!
ಸ್ಥಳೀಯರಲ್ಲಿ ಕುತೂಹಲ, ಆತಂಕ

ಉತ್ತರಖಾಂಡ, ನ.20: ಉತ್ಖನನದ ವೇಳೆ ಡೈನೋಸಾರ್ ನಂತೆ ಕಾಣುವ ಜೀವಿಯೊಂದರ ಪಳೆಯುಳಿಕೆ ಸಿಕ್ಕಿರುವ ಘಟನೆ ಉತ್ತರಾಖಂಡ್ ನ ಜಸ್ಪುರ್ ಎಂಬಲ್ಲಿ ನಡೆದಿದೆ.
ಪಳೆಯುಳಿಕೆ ಸಿಕ್ಕಿದ ಭೂಮಿ ರಾಜ್ಯ ವಿದ್ಯುತ್ ಇಲಾಖೆಗೆ ಸೇರಿದ್ದಾಗಿದ್ದು, ಇಲ್ಲಿ ಮೂರು ದಶಕಗಳಿಂದ ವಿದ್ಯುತ್ ಘಟಕವೊಂದು ಕಾರ್ಯಾಚರಿಸುತ್ತಿದೆ.
ಪಳೆಯುಳಿಕೆ ಸಿಕ್ಕಿದ್ದರ ಬಗ್ಗೆ ಮೊದಲಿಗೆ ಕೆಲ ಕಾರ್ಮಿಕರು ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರಿಗೆ ಹಾಗು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು ಎಂದು ವಿದ್ಯುತ್ ಇಲಾಖೆಯ ಬಲಿ ರಾಮ್ ಎಂಬವರು ತಿಳಿಸಿದ್ದಾರೆ.
“ಪಳೆಯುಳಿಕೆಯ ಹಿಂದಿನ ಕಾಲುಗಳ ಸುತ್ತಳತೆ 29 ಸೆ.ಮೀ. ಆಗಿದೆ ಹಾಗು ಬಾಲ 5 ಸೆ.ಮೀ. ಉದ್ದವಿದೆ. ಈ ಪಳೆಯುಳಿಕೆಯನ್ನು ಡೆಹ್ರಾಡೂನ್ ಮೂಲದ ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಕಳುಹಿಸಲಾಗುವುದು.
ಸುದ್ದಿ ಪ್ರಚಾರವಾಗುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ಆಗಮಿಸಿದ್ದಾರೆ. "ಇಂತಹ ಇನ್ನಷ್ಟು ಜೀವಿಗಳು ಇಲ್ಲಿರುವ ಸಾಧ್ಯತೆ ಇರುವುದರಿಂದ ನಾವು ಗೊಂದಲದಲ್ಲಿದ್ದೇವೆ. ಸಮೀಪದ ಪ್ರದೇಶದಲ್ಲಿ ಹುಡುಕಾಟ ನಡೆಸುವಂತೆ ನಾವು ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದೇವೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.







