ಗೋ.ಮಧುಸೂಧನ್ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಆಕ್ರೋಶ: ನ.22 ರಂದು ಮೈಸೂರು ಬಂದ್

ಮೈಸೂರು, ನ.20: ದೇಶದ ಸಂವಿಧಾನಕ್ಕೆ ಅವಮಾನಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಧೋರಣೆ ಖಂಡಿಸಿ ನ.22ರಂದು ಮೈಸೂರು ಬಂದ್ ಗೆ ಕರೆ ನೀಡಲಾಗಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದ್ದಾರೆ.
ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟಗಳು ಸೇರಿ ಗೋ. ಮಧುಸೂದನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಳೆದ ನ.9ರಿಂದ ನಡೆಸಿರುವ ಹೋರಾಟವನ್ನು ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷಿಸಿದ್ದು, ಇದನ್ನು ಖಂಡಿಸಿ ಶಾಂತಿಯುತ ಹೋರಾಟಕ್ಕೆ ಹಲವಾರು ಸಂಘಟನೆಗಳು ಮುಂದಾಗಿವೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ವಕೀಲರು, ಸಾಹಿತಿಗಳು, ಅಂಬೇಡ್ಕರ್ ಅಭಿಮಾನಿಗಳು, ಪಿಎಫ್ ಐ, ಎಸ್ ಡಿಪಿಐ ದಲಿತ ಸಂಘಟನೆಗಳ ಮುಖಂಡರು, ಅಲ್ಪಸಂಖ್ಯಾತ ಮಠಾಧೀಶರು ಹಾಗೂ ಹಲವಾರು ಪ್ರಗತಿಪರ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ನಗರದ ವಿವಿಧ ಬಡಾವಣೆಗಳಿಂದ ಪ್ರತಿಭಟನಾಕಾರರು ಮೆರವಣಿಗೆ ಮೂಕಲ ಪುರಭವನದ ಬಳಿ ಜಮಾಯಿಸಲಿದ್ದು, ನಂತರ ಅಲ್ಲಿಂದ ಡಿ.ದೇವರಾಜ ಅರಸು ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮಟ್ಟದ ಮೆರವಣಿಗೆ ತೆರಳಿದೆ. ಬಳಿಕ ಜಿಲ್ಲಾಧಿಕಾರಿಗೆ ಮನವಿ ಪ್ರತಿಯನ್ನು ಸಲ್ಲಿಸಲಾಗುವುದು ಎಂದವರು, ಮೈಸೂರು ಬಂದ್ ನಲ್ಲಿ ಶಾಲಾ ಕಾಲೇಜು, ಸಾರಿಗೆ ವ್ಯವಸ್ಥೆಯನ್ನು ಬಂದ್ ಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಚಿತ್ರದುರ್ಗದ ಚಲುವಾದಿ ಮಠದ ನಾಗಲಿಂಗ ಸ್ವಾಮೀಜಿ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸಂಚಾಲಕ ಬಾಸ್ಕರ್ ಎನ್. ಎಸ್ ಟಿಪಿಐ ಉಪಾಧ್ಯಕ್ಷ ಪುಟ್ಟನಂಜಯ್ಯ, ಸಿದ್ಧಾರ್ಥ ಬಡಾವಣೆಯ ಸ್ನೇಹ ಸೌಹಾರ್ದ ಸಂಘದ ಅಧ್ಯಕ್ಷ ಆರ್.ಸಿದ್ದ ಬಸವಯ್ಯ ಮತ್ತಿತರರಿದ್ದರು.
ವಿವಿಧ ಸಂಘಟನೆಗಳ ಬೆಂಬಲ: ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಗೋ.ಮಧುಸೂದನ್ ವಿರುದ್ಧ ಕ್ರಮ ಜರಗಿಸುವಂತೆ ಒತ್ತಾಯಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ನ.22ರಂದು ಕರೆ ನೀಡಿರುವ ಮೈಸೂರು ಬಂದ್ ಗೆ ಮೈಸೂರು ವಿವಿಯ ದಲಿತ ವಿದ್ಯಾರ್ಥಿ ಒಕ್ಕೂಟ, ಸಂಶೋಧಕರ ಸಂಘ, ಯುವ ಪ್ರಗತಿಪರ ಚಿಂತಕರ ಸಂಘ ಬಿವಿಎಸ್, ಧನಗನಹಳ್ಳಿ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ, ಕರ್ನಾಟಕ ದಲಿತ ವೇದಿಕೆ ಮೊದಲಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.







