ಕಳಪೆ ಆಹಾರ ಪದ್ಧತಿಯಿಂದ ರಕ್ತದೊತ್ತಡ: ಡಾ.ಬಿ.ಸಿ.ಶ್ರೀನಿವಾಸ್
ಬೆಂಗಳೂರು, ನ.20: ಕಳಪೆ ಆಹಾರ ಪದ್ಧತಿ ಅಧಿಕ ರಕ್ತದೊತ್ತಡಕ್ಕೆ ರಹದಾರಿಯಾಗಿದ್ದು, ಶುದ್ಧ ಹಾಗೂ ಆರೋಗ್ಯಪೂರ್ಣ ಆಹಾರ ಸೇವನೆಯಿಂದ ಇಂತಹ ಅಪಾಯದಿಂದ ದೂರಾಗಬಹುದು ಎಂದು ಜಯದೇವ ಆಸ್ಪತ್ರೆಯ ಕಾರ್ಡಿಯೋಲಾಜಿಸ್ಟ್ ಡಾ.ಬಿ.ಸಿ.ಶ್ರೀನಿವಾಸ್ ತಿಳಿಸಿದ್ದಾರೆ.
ನಗರದ ಜಯದೇವ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡದ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೊಜ್ಜು, ತಂಬಾಕು ಬಳಕೆ, ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಒತ್ತಡ, ಹೆಚ್ಚು ಮದ್ಯಪಾನ ರಕ್ತದೊತ್ತಡಕ್ಕೆ ರಹದಾರಿಯಾಗಿದೆ. ಹೀಗಾಗಿ ಜೀವನದಲ್ಲಿ ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳುವುದರಿಂದ ಎಲ್ಲ ರೀತಿಯ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದರು.
ಬೆಳಗ್ಗೆ ಮತ್ತು ರಾತ್ರಿ ವೇಳೆ ರಕ್ತದೊತ್ತಡವನ್ನು ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೃದಯನಾಳಗಳ ಚಲನವಲನಗಳನ್ನು ಅಳೆಯುವುದಕ್ಕೆ ಸಹಾಯವಾಗುತ್ತದೆ. ಮಲಗುವ ಸಂದರ್ಭದಲ್ಲಿ ರಕ್ತದೊತ್ತಡವನ್ನು ಮಾಪನ ಮಾಡುವುದು ಉತ್ತಮವಾಗಿರುತ್ತದೆ. ಇದರಿಂದ ಮರಣದ ಪ್ರಮಾಣದ ಎಲ್ಲ ಕಾರಣಗಳನ್ನು ಊಹಿಸಲು ಸಾಧ್ಯವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ನಿಗದಿತವಾಗಿ ರಕ್ತದೊತ್ತಡವನ್ನು ಪರೀಕ್ಷೆಗೆ ಮತ್ತು ತಪಾಸಣೆಗೆ ಒಳಪಡಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ಕೆಲವರು ವೈದ್ಯರ ಬಳಿಗೆ ಹೋದರೆ ರಕ್ತದೊತ್ತಡ ಬಂದು ಬಿಡುತ್ತದೆ ಎಂಬ ಭೀತಿಯಿಂದ ನರಳುತ್ತಾರೆ. ಇಂತಹ ಪೂರ್ವಗ್ರಹಗಳನ್ನು ಬಿಟ್ಟು ಪ್ರತಿಯೊಬ್ಬರು ನಿಗದಿತವಾಗಿ ತಪಾಸಣೆ ಒಳಗಾಗುವ ಮೂಲಕ ಮುಂಬರುವ ಅಪಾಯದಿಂದ ಪಾರಾಗಬೇಕು ಎಂದು ಸಲಹೆ ನೀಡಿದರು.
ಆ್ಯಂಬ್ಯುಲೇಟರಿ ಬ್ಲಡ್ ಪ್ರೆಶರ್ ಮಾನಿಟರಿಂಗ್ (ಎಬಿಪಿಎಂ) ಜಾಗತಿಕ ಮಟ್ಟದಲ್ಲಿ ಗೋಲ್ಡ್ ಸ್ಟಾಂಡರ್ಡ್ ಪದ್ಧತಿ ಎಂದು ಪರಿಗಣಿಸಲಾಗಿದೆ. ಈ ಪದ್ಧತಿಯಡಿ ರೋಗಿಯ ರಕ್ತದೊತ್ತಡವನ್ನು ದಿನದ 24 ಗಂಟೆಗಳ ಕಾಲ ನಿರಂತರವಾಗಿ ಅವಲೋಕನ ನಡೆಸಲಿದೆ. ಈ ಆ್ಯಂಬ್ಯುಲೇಟರಿ ಬ್ಲಡ್ ಪ್ರೆಶರ್ ಮಾನಿಟರಿಂಗ್ (ಎಬಿಪಿಎಂ) ಬಗ್ಗೆ ರೋಗಿಗಳು ತಮ್ಮ ಸಮೀಪದ ವೈದ್ಯರ ಬಳಿ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದರು.







