ನಗರಸಭೆ ಆಯುಕ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಸಚಿವ ರಮಾನಾಥ್ ರೈ
ಕಾವೇರಿ ನದಿ ಮಾಲಿನ್ಯ
ಬೆಳಗಾವಿ, ನ. 20: ಕೊಡಗು ಜಿಲ್ಲೆಯಲ್ಲಿ ಹುಟ್ಟುವ ಕಾವೇರಿ ನದಿ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳದ ಸ್ಥಳೀಯ ಸಂಸ್ಥೆಗಳಾದಂತಹ ರಾಮನಗರ, ನಂಜನಗೂಡು, ಟಿ.ನರಸೀಪುರ ನಗರಸಭೆ ಆಯುಕ್ತರ ವಿರುದ್ಧ ಹಾಗೂ ಹುಣಸೂರು, ಕೆಆರ್ ನಗರ ಪುರಸಭೆ ಮುಖ್ಯ ಅಧಿಕಾರಿಗಳ ವಿರುದ್ಧ ಜಲ ಮಾಲಿನ್ಯ ಕಾಯ್ದೆ 1974ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ್ ರೈ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ವೈಎಸ್‍ವಿ ದತ್ತ ಕೇಳಿದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಕಾವೇರಿ ನದಿ ಪಾತ್ರದಲ್ಲಿ ಹೋಮ್ ಸ್ಟೇಗಳು, ರೆಸಾರ್ಟ್‍ಗಳು ಹಾಗೂ ಸಣ್ಣ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯದಿಂದ ಕಾವೇರಿ ನೀರು ಕಲುಷಿತ ಆಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಕಾವೇರಿ ನದಿ ದಂಡೆಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉಂಟಾಗುವ ಜಲ ಮಾಲಿನ್ಯವನ್ನು ತಡೆಗಟ್ಟಲು ಕಾರ್ಯ ಯೋಜನೆಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಮಂಡಳಿಯಿಂದ ನಿರ್ದೇಶನ ನೀಡಲಾಗಿದೆ ಎಂದವರು, ಮಾಲಿನ್ಯ ನಿಯಂತ್ರಣ ಮಂಡಳಿ ಆಗಿದಾಗ್ಗೆ ಕಾವೇರಿ ನದಿಯಲ್ಲಿನ 38 ಸ್ಥಳಗಳಲ್ಲಿ ಸಂಗ್ರಹಿಸಿದ ನೀರಿನ ಮಾದರಿಗಳ ವಿಶ್ಲೇಷಣಾ ವರದಿಯನ್ವಯ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.





